ರೈಲಿಗೆ ಸಿಕ್ಕಿ ವಿದ್ಯಾರ್ಥಿನಿ ಸಾವು
ಕ.ಪ್ರ.ವಾರ್ತೆ ಕೋಲಾರ ಡಿ.27
ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ನರ್ಸಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ-ಬಂಗಾರಪೇಟೆ ಬೈಪಾಸ್ ಸೇತುವೆ ಬಳಿ ನಡೆದಿದೆ.
ಮೃತ ದುರ್ದೈವಿಯನ್ನು ಮುಳಬಾಗಿಲು ತಾಲೂಕಿನ ಮಂಡಿಕಲ್ ಗ್ರಾಮದ ಆರ್. ಕವಿತ ಎಂದು ಗುರುತಿಸಲಾಗಿದೆ. ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ 4ನೇ ವರ್ಷದ ಬಿಎಸ್ಸಿ ನರ್ಸಿಂಗ್ ಓದುತ್ತಿರುವ ಕವಿತ ಬೈಪಾಸ್ ರಸ್ತೆಯ ಸಮೀಪದ ಚನ್ನೇಗೌಡ ಕಾಲೇಜ್ ಆಫ್ ನರ್ಸಿಂಗ್ನಲ್ಲಿ ಅರೆ ಕಾಲಿಕ ಶಿಕ್ಷಕಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ಬರಲು ಬೈಪಾಸ್ ಬಳಿಯ ರೈಲು ಹಳಿಗಳನ್ನು ದಾಟುತ್ತಿದ್ದಾಗ ಬಂಗಾರಪೇಟೆಯಿಂದ ಕೋಲಾರಕ್ಕೆ ಬರುತ್ತಿದ್ದ ಎಂಜಿನ್ ಸಮೇತದ ಒಂದು ಬೋಗಿಯುಳ್ಳ ರೈಲಿಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಮೃತಳ ತಾಯಿ ಪಾರ್ವತಮ್ಮ ಹೇಳಿಕೆಯನ್ನು ಪಡೆದು ರೇಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.