ಸರ್ಕಾರಿ ಶಾಲೆಗಳ ಸೌಲಭ್ಯ ಪಡೆಯಲು ಕರೆ
ಚಿಂತಾಮಣಿ: ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಪೋಷಕರು ಮರುಳಾಗದೆ ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕರೆ ನೀಡಿದರು. ತಾಲೂಕಿನ ದೊಡ್ಡಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಉಚಿತ ಸ್ಕೂಲ್ಬ್ಯಾಗ್ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಉಚಿತ ಬೈಸಿಕಲ್, ಕ್ಷೀರಭಾಗ್ಯ ಸೇರಿದಂತೆ ವಿದ್ಯಾರ್ಥಿ ವೇತನಗಳನ್ನು ನೀಡಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು. ಕೋಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್ ಮಾತನಾಡಿ, ಶಿಕ್ಷಕರು ಗ್ರಾಮೀಣ ಮಕ್ಕಳ ಉತ್ತಮ ಗುಣಮಟ್ಟ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಆಸಕ್ತಿ ತೋರಿದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದು ಹೇಳಿದರು. ತಾಪಂ ಅಧ್ಯಕ್ಷ ಗೌರಮ್ಮನಾಗೇಶ್ ಮಾತನಾಡಿದರು. ಡಾ. ಮಾದವ್, ಡಾ. ಹನುಮಂತರಾವ್, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಕುರುಬೂರು ರವೀಂದ್ರಗೌಡ, ಕೃಷ್ಣಮೂರ್ತಿ, ರಾಚಾಪುರ ಶ್ರೀನಿವಾಸ್ ಇದ್ದರು.