ಸುದ್ದಿ ಸಂಕ್ಷೇಪ
ಇಂದು ತಾಪಂ ಸಾಮಾನ್ಯ ಸಭೆ
ಗೌರಿಬಿದನೂರು: ಡಿ.28 ರಂದು ತಾಪಂ ಸಾಮಾನ್ಯ ಸಭೆಯನ್ನು ಲಕ್ಷ್ಮೀದೇವಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ತಾಪಂ ಇಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರಿನಿರ್ವಾಣ ದಿನ: ವಿಚಾರ ಸಂಕಿರಣ
ಗೌರಿಬಿದನೂರು: ವಿಚಾರ ವೇದಿಕೆ ಹಾಗೂ ಸಮಾನ ಮನಸ್ಕರ ಗೆಳೆಯರ ಬಳಗದಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಚಾರ ಸಂಕಿರಣವನ್ನು ವಿಚಾರ ವೇದಿಕೆಯ ಆಶ್ರಯದಲ್ಲಿ 28ರ ಬೆಳಗ್ಗೆ 11ಗಂಟೆಗೆ ಆಚಾರ್ಯ ಪ್ರೌಢ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಜಲ ಶಿಕ್ಷಕ ಪ್ರೊ.ಕೆ. ನಾರಾಯಣಸ್ವಾಮಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರೊ.ಬಿ. ಗಂಗಾಧರಮೂರ್ತಿ ವಹಿಸಲಿದ್ದಾರೆ. ಕೆ.ಎಂ. ಕೊಮ್ಮಣ್ಣ, ಹ.ಮ. ರಾಮಚಂದ್ರ, ಟಿ.ಸಿ ಪ್ರಭಾ, ಗೀತಾ ಜಯಂಧರ್, ಸಿ. ಚನ್ನಪ್ಪ, ಎಂ.ಆರ್. ಸತ್ಯನಾರಾಯಣ, ಎಂ. ನಾರಾಯಣಸ್ವಾಮಿ, ನಕ್ಕಲಹಳ್ಳಿ ಆದಿನಾರಾಯಣಪ್ಪ ಭಾಗವಹಿಸಲಿದ್ದಾರೆ.
ಜ.5ರಂದು ಮಡಿವಾಳ ಜನಾಂಗ ಸಮಾವೇಶ
ಚಿಂತಾಮಣಿ: ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಜನವರಿ 5ರಂದು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರಾಜ್ಯ ಮಡಿವಾಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಮಡಿವಾಳರ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಡಿವಾಳರ ತಾಲೂಕು ಘಟಕದ ಡಾ. ರಾಮಮೂರ್ತಿ, ಡಿಪೋ ಚಲಪತಿ, ಬ್ಯಾಂಕ್ ಕೃಷ್ಣಪ್ಪ, ಪದಾಧಿಕಾರಿಗಳು ಮಾತನಾಡಿ, ಮಡಿವಾಳರ ಬೇಡಿಕೆಗಳಾದ ಪ್ರೊ. ಅನ್ನಪೂರ್ಣ ಅವರ ವರದಿ ಅನುಸಾರ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಡಿವಾಳರ ಸಂಘದ ಮುಖಂಡರಾದ ಕೆ.ಎಸ್.ಆರ್.ಟಿ.ಸಿ ನಾರಾಯಣಸ್ವಾಮಿ, ಟೈಲರ್ ವೆಂಕಟರವಣ, ಬಿ.ಎನ್.ನಾಗರಾಜು, ವೆಂಕಟೇಶ್ (ಅಪ್ಪಿ), ಶ್ರೀನಿವಾಸ್, ಅಮರ್‌ನಾಥ್, ರಾಮಚಂದ್ರ, ಬಲರಾಮ್, ಮಂಜು ಇನ್ನೂ ಹಲವು ಮುಖಂಡರು ಸೇರಿದಂತೆ, ಕುಲಬಾಂಧವರು ಉಪಸ್ಥಿತರಿದ್ದರು.
ರೈಲು ತಡೆದು ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಡಿ.27
ಬಂಗಾರಪೇಟೆಯಿಂದ ಕೋಲಾರಕ್ಕೆ ಬರುತ್ತಿದ್ದ ರೈಲಿಗೆ ಸಿಲುಕಿ ನರ್ಸಿಂಗ್ ವಿದ್ಯಾರ್ಥಿನಿ ಕವಿತ ಎಂಬುವರು ಸತ್ತ ಹಿನ್ನೆಲೆಯಲ್ಲಿ ಸಾರ್ವಜನಿಕರು ರೈಲು ತಡೆದು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಬೆಳಿಗ್ಗೆ ಬಂಗಾರಪೇಟೆ ಬೈಪಾಸ್ ಬಳಿಯ ರೈಲು ಹಳಿ ದಾಟುವಾಗ ವಿದ್ಯಾರ್ಥಿನಿ ರೈಲಿಗೆ ಸಿಕ್ಕಿ ಸ್ಥಳದಲ್ಲೇ ಸತ್ತಿದ್ದರು. ರೈಲಿನ ಚಾಲಕ ನಿಲ್ಲಿಸದೆ ಮುಂದೆ ಸಾಗಿದ ಎಂಬ ಕಾರಣಕ್ಕೆ ಕುಪಿತರಾದ ಸಾರ್ವಜನಿಕರು ರೈಲನ್ನು ತಡೆದು ಪ್ರತಿಭಟಿಸಿದರು. ಪೊಲೀಸರು ಜನರನ್ನು ಸಮಾಧಾನಪಡಿಸಿದರು. ಅಪಘಾತ ಸ್ಥಳಕ್ಕೆ ಡಿವೈಎಸ್ಪಿ ಅಶೋಕ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ರೈಲು ಹತ್ತಲು ಹೋಗಿ ಬಿದ್ದಿದ್ದ ಮಹಿಳೆ ಸಾವು
ಬಂಗಾರಪೇಟೆ: ಗುರುವಾರ ಸಂಜೆ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಆಕಸ್ಮಿಕವಾಗಿ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದ ಮಹಿಳೆಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಬೆಂಗಳೂರಿನ ಕೆ.ಆರ್.ಪುರಂ ಬಳಿಯಿರುವ ನಾರಾಯಣಪುರ ನಿವಾಸಿ ರುಕ್ಮಣಿ 55ಎಂಬಾಕೆಯ ಮೃತಪಟ್ಟಿದ್ದು, ಈಕೆ ಕೆಜಿಎಫ್‌ನ ಕೋರಮಂಡಲದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದು, ಗುರುವಾರ ಬೆಂಗಳೂರಿಗೆ ವಾಪಸಾಗಲು ಪಟ್ಟಣಕ್ಕೆ ಬಂದಿದ್ದು, ಸಂಜೆ ರೈಲು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ರೈಲಿನ ಚಕ್ರಕ್ಕೆ ಸಿಲುಕಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದರೂ ರೈಲ್ವೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸದೆ ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದರಿಂದ ತೀವ್ರವಾಗಿ ರಕ್ತ ಸಾವ್ರವಾಗಿತ್ತು. ನಂತರ ಇತರೇ ಪ್ರಯಾಣಿಕರ ರೈಲ್ವೆ ಪೊಲೀಸರ ಕರ್ತವ್ಯ ಲೋಪದ ಬಗ್ಗೆ ತೀವ್ರ ಆಕ್ರೋಶವ್ಯಕ್ತವಾದಾಗ ಆಕೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.