ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಿಗಳ ನಿರ್ಲಕ್ಷ್ಯ: ಸಭೆ ಮುಂದೂಡಿಕೆ

Rashmi Kasaragodu
Updated On : 29 Dec 2013, 1:41 am

ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿಲಕ್ಷ್ಯದ ಫಲವಾಗಿ ಶನಿವಾರ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರ ಸಂಘ ರಚನೆಗಾಗಿ ಸಂಬಂಧಪಟ್ಟ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಕರೆದಿದ್ದ ಸಭೆಗೆ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಯಾವುದೇ ಚರ್ಚೆ ನಡೆಯದೇ ಸಭೆಯನ್ನು ಮುಂದೂಡಲಾಗಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳ ಜತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯು ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಹೆಚ್ಚಿಗೆ ಬೆಳೆಯುವುದರಲ್ಲಿ ಖ್ಯಾತಿ ಪಡೆದಿದೆ. ಈ ಭಾಗದಲ್ಲಿ ಸುಮಾರು 650 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಅನೇಕ ಮಂದಿ ರೈತರು ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ. ಆದರೆ, ಇದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ದ್ರಾಕ್ಷಿ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತ ರೈತರು ಆಗಾಗ ನಷ್ಟ ಅನುಭವಿಸುತ್ತಲೇ ಇದ್ದಾರೆ. ಇಷ್ಟಾದರೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸ್ಪಂದನೆ ಅಷ್ಟಕಷ್ಟೇ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿಯನ್ನು ಬೆಳೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿ ಬಂದು ಸರ್ಕಾರದ ಗಮನ ಸೆಳೆಯಲಾಗಿದೆ. ಕೊನೆಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಶನಿವಾರ ಸಭೆ ಕರೆದು ಚರ್ಚಿಸುವ ಮೂಲಕ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾದವರಂತೆ ಕಂಡು ಬಂದರಾದರೂ ಸಭೆ ವಿಫಲವಾಗಿದೆ. ಇನ್ನೂ ಸಭೆಗೆ ಹೋದ ಕೆಲ ರೈತರು ಸಪ್ಪೆ ಮುಖ ಹಾಕಿಕೊಂಡ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಾಸ್ಸಾಗಿದ್ದಾರೆ.
ಸಭೆ ಮುಂದೂಡಿಕೆ: ಕಳೆದ ಮೂರು ವರ್ಷದ ಹಿಂದೆ 500 ರು. ಪಡೆದು ಸುಮಾರು 414 ಮಂದಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರನ್ನು ಷೇರುದಾರನ್ನಾಗಿ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದ್ದರೂ ಸಭೆಗೆ ಬಂದವರ ಸಂಖ್ಯೆ 100 ಕ್ಕಿಂತ ಹೆಚ್ಚಿಗೆ ಇರಲಿಲ್ಲ. ಆದರೆ, ಸರ್ಕಾರದ ನಿಯಮದಂತೆ ಶೇ.50 ರಷ್ಟು ಮಂದಿ ಷೇರುದಾರರ ಹಾಜರಾತಿಯಿರಬೇಕು. ಆಗ ಮಾತ್ರ ಕೈಗೊಂಡ ತೀರ್ಮಾನಗಳಿಗೆ ಮಾನ್ಯತೆ ಸಿಗುವುದು.ಆದರೆ, ರೈತರು ಹೆಚ್ಚಿನ ಗೈರು ಹಾಜರಾತಿಯಿಂದ ಆತುರಾತುರವಾಗಿಯೇ ಕರೆದಿದ್ದ  ಸಭೆಯನ್ನು ಅಧಿಕಾರಿಗಳು ಮುಂದೂಡಿದರು. ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಸಭೆಯನ್ನು ನಡೆಸಲಾಗುವುದು ಎಂದೇಳಿ ರೈತರನ್ನು ಸಾಗ ಹಾಕಿದರು.
ಸಭೆಯಲ್ಲಿದ್ದ ರೈತರು ಈಗ ಕೇವಲ ಚರ್ಚೆ ನಡೆಸಿ ತಾತ್ಕಾಲಿಕವಾಗಿ ಸಂಘವನ್ನು ರಚಿಸಬೇಕು. ಮುಂದಿನ ದಿನಗಳಲ್ಲಿ ಮತ್ತೊಂದು ಸಭೆಯನ್ನು ನಡೆಸಬೇಕು. ಈ ಬಗ್ಗೆ ಸಂಘದ ಮೂಲಕ ಇತರೆ ರೈತರಿಗೆ ತಿಳಿಸಬೇಕು. ಆಗ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಬಂದಾಗ ಪರಿಪೂರ್ಣವಾದ ಸಮಿತಿಯನ್ನು ರಚನೆ ಮಾಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೆ, ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಮುಂದಿನ ಸಭೆಯ ಬಗ್ಗೆ ಸೂಕ್ತ ಪ್ರಚಾರ ಕೈಗೊಂಡು ಹೆಚ್ಚಿಗೆ ರೈತರು ಬರುವಂತೆ ಮಾಡಲಾಗುವುದು.ಆ ಸಭೆಯಲ್ಲಿ ಒಂದು ನಿರ್ಧಾರ ಕೈಗೊಂಡು ಸಂಘವನ್ನು ರಚಿಸಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ.
ಸಮರ್ಪಕ ಮಾಹಿತಿ ಇಲ್ಲ; ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಕರೆದಿದ್ದ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರ ಸಭೆಯ ಬಗ್ಗೆ ಸಮರ್ಪಕವಾಗಿ ಮಾಹಿತಿಯೇ ತಮಗೆ ಸಿಕ್ಕಿಲ್ಲ ಎಂಬ ಆರೋಪಗಳು ರೈತರುಗಳಿಂದ ಕೇಳಿ ಬಂದಿವೆ.
ಷೇರನ್ನು ಹೊಂದಿರುವ ತಮಗೆ ಸಭೆಯ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಬೇರೆಯವರಿಂದ ಮಾಹಿತಿಯನ್ನು ತಿಳಿದುಕೊಂಡು ಅನುಮಾನದಲ್ಲಿಯೇ ಸಭೆಗೆ ಬಂದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಅಂಚೆ ಪತ್ರವನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ನಮಗ್ಯಾರಿಗೂ ಪತ್ರವೇ ಬಂದಿಲ್ಲ ಎನ್ನುವುದು ರೈತರ ಮಾತಾಗಿದೆ. ಮತ್ತೊಂದೆಡೆ ಅಧಿಕಾರಿಗಳು ಅಸಮರ್ಪಕವಾದ ವಿಳಾಸವನ್ನು ಬರೆದು ಅಂಚೆ ಪತ್ರವನ್ನು ಕಳುಹಿಸಿರುವುದೇ ಯಡವಟ್ಟಿಗೆ ಕಾರಣ ಎಂಬ ಮಾತಿನ ಜೊತೆಗೆ ಸಭೆಯ ಬಗ್ಗೆ ಸರಿಯಾಗಿ ಪ್ರಚಾರವನ್ನು ಕೊಟ್ಟಿಲ್ಲ. ಅಲ್ಲದೇ ಸಭೆ ನಡೆಯುವ ದಿನವನ್ನು ಸಹ ದಿಢೀರನೇ ನಿಗದಿಪಡಿಸಲಾಗಿದೆ ಆರೋಪ ಕೇಳಿ ಬಂದಿದೆ.


ಸಭೆಯ ಬಗ್ಗೆ ತಮಗೆ ತಿಳಿಸದಿರುವುದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಆದರೆ, ಪತ್ರ ಬರೆದಿದ್ದೇವೆ ಎಂದು ಅಧಿಕಾರಿಗಳು ಉತ್ತರಿಸಿದರು. ಆದರೆ, ಅದು ನಮಗೆ ತಲುಪಿಲ್ಲ.
ಟಿ ಪುರದಗಡ್ಡೆ ಕೃಷ್ಣಪ್ಪ, ದ್ರಾಕ್ಷಿ ಬೆಳೆಗಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement