ಅರ್ಹರಿಗೆ ಆಧಾರ ರಹಿತ ಸಾಲ: ಕೆ.ಎಚ್. ಮುನಿಯಪ್ಪ
ಶಿಡ್ಲಘಟ್ಟ: ತಾಲೂಕಿನ ಪ್ರತಿಯೊಂದು ಅರ್ಹ ಫಲಾನುಭವಿಗಳಿಗೆ ಆಧಾರ ರಹಿತ ಸಾಲವನ್ನು ನೀಡಲಾಗುತ್ತದೆ. ನಾಗರಿಕರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬ್ಯಾಂಕರ್ಸ್ ಸಭೆಯಲ್ಲಿ ಮಾತನಾಡಿದ ಅವರು, ನಿರುದ್ಯೋಗಿಗಳು ಸರ್ಕಾರಿ ಕೆಲಸಗಳ ಮೇಲೆ ಅವಲಂಬಿತರಾಗದೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕಬೇಕು ಎಂದರು. ಮುಂದಿನ ಹತ್ತು ದಿನಗಳಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಸಾಲ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ಒಂದು ಸಾವಿರ ಕುಟುಂಬಗಳಿಗೆ ಮೊದಲ ಸುತ್ತಿನಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಯೋಜನೆಗಳನ್ನು ಜನತೆಗೆ ತಲುಪಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಪ್ರಧಾನ ವ್ಯವಸ್ಥಾಪಕ ಸಂಪತ್ ಕುಮಾರ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರೂ ಸೇರಿದಂತೆ ನಾಗರಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಪ್ರತಿ ಬ್ಯಾಂಕುಗಳಲ್ಲಿಯೂ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದರು. ಜಿಲ್ಲಾಧಿಕಾರಿ ವಿಶಾಲ್, ಲೀಡ್ ಬ್ಯಾಂಕ್ ಮೇನೇಜರ್ ಸುಂದರೇಶ್, ಶಾಸಕ ಎಂ. ರಾಜಣ್ಣ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೀಲಾ ಮಂಜುನಾಥ್, ಜಿಪಂ ಸದಸ್ಯ ಸತೀಶ್, ತಾಪಂ ಅಧ್ಯಕ್ಷ ಯರಬಚ್ಚಪ್ಪ, ಉಪಾಧ್ಯಕ್ಷೆ ಸರಸ್ವತಮ್ಮತಮ್ಮಣ್ಣ, ಸದಸ್ಯರಾದ ನರಸಿಂಹಮೂರ್ತಿ, ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಭೂನ್ಯಾಯಮಂಡಳಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ಕಂಬದಹಳ್ಳಿ ಕದಿರಪ್ಪ, ಹಾಗೂ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು ಹಾಜರಿದ್ದರು.