ಗುಂಪುಗಳ ಮಾರಾಮಾರಿ: ಐವರಿಗೆ ತೀವ್ರ ಗಾಯ
ಚಿಂತಾಮಣಿ: ಜಮೀನು ವಿವಾದ ಹಿನ್ನೆಲೆಯಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ಉಂಟಾಗಿ 5ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯವಾದ ಘಟನೆ ಕೆಂಚಾರ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ಗುಡಿಸಲಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಘಟನೆಯಲ್ಲಿ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆದಿದೆ.
ಘಟನೆ ವಿವರ: ಗುಡಿಸಲಹಳ್ಳಿಯ ಲಕ್ಷ್ಮಣರೆಡ್ಡಿ ಹಾಗೂ ವೆಂಕಟರಮಣ ಅಲಿಯಾಸ್ ವೆಂಕಟರೆಡ್ಡಿ ಎಂಬವರಿಗೆ ಗ್ರಾಮದ ಹೊರ ವಲಯದಲ್ಲಿರುವ ಸರ್ವೆ ನಂ. 48, 3, 4, 6, 8, 9ಕ್ಕೆ ಸಂಬಂಧಿಸಿ 5 ಎಕರೆ ಜಮೀನು ವಿವಾದ ನ್ಯಾಯಾಲಯದಲ್ಲಿತ್ತು. ಆದರೆ 2 ದಿನದ ಹಿಂದೆ ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಬರುವ ಸೂಚನೆ ತಿಳಿದ 2 ಗುಂಪುಗಳು ಪರಸ್ಪರ ಜಮಾವಣೆಗೊಂಡಿದ್ದರು. ಈ ಸಂದರ್ಭದಲ್ಲಿ ವೆಂಕಟರೆಡ್ಡಿ ಜಮೀನಿನಲ್ಲಿ ಹುರಳಿ ಕಾಳು ಕೀಳಲು ಹೋದ ಲಕ್ಷ್ಮಣರೆಡ್ಡಿ ಗುಂಪು ಮುಂದಾದಾಗ ಇದಕ್ಕೆ ವೆಂಕಟರೆಡ್ಡಿ ವಿರೋಧ ವ್ಯಕ್ತಪಡಿಸಿ ಪರಸ್ಪರ ವಾದ ವಿವಾದ ಬೆಳೆದು ಕೈ ಮಿಲಾಯಿಸುವ ಮಟ್ಟಿಗೆ ವಿಕೋಪಕ್ಕೆ ತಿರುಗಿತು. ಮಂಜುನಾಥ,ಶ್ರೀನಿವಾಸ, ರವಿ, ರವಣಮ್ಮ ಹಾಗೂ ಶಿಲ್ಪ ಎಂಬವರಿಗೆ ತೀವ್ರ ಗಾಯಗಳಾಗಿ ಈ ಪೈಕಿ ರವಣಮ್ಮ ಪರಿಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘರ್ಷಣೆ ನಡೆವಾಗ ತಕ್ಷಣ ಸ್ಥಳಕ್ಕಾಗಮಿಸಿ ಕೆಂಚಾರ್ಲಹಳ್ಳಿ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜಣ್ಣ ಹಾಗೂ ಸಿಬ್ಬಂದಿ 2 ಗುಂಪುಗಳನ್ನು ಚದುರಿಸಲು ಮುಂದಾದಾಗ ಚಿಂತಾಮಣಿ ಕಡೆಯಿಂದ ಗುಂಪೊಂದು ವಾಹನದಲ್ಲಿ ಬಂದು ದೊಣ್ಣೆ, ಕಲ್ಲುಗಳಿಂದ ದಾಳಿ ನಡೆಸಿದ್ದಾರೆ. ಇದರಿಂದ ಪೊಲೀಸರು ಗುಂಪಿಗೆ ಲಾಠಿ ರುಚಿ ತೋರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಪೊಲೀಸ್ ಬಂದೋಬಸ್ತ್: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು 2 ಕಡೆ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.