ತಂದೆಯಿಂದಲೇ ಲೈಂಗಿಕ ಕಿರುಕುಳ
ಚಿಕ್ಕಬಳ್ಳಾಪುರ; ಕಾಮುಕ ವರ್ತನೆಯಿಂದ ತಂದೆಯೇ ಮಗಳ ಸಾವಿಗೆ ಕಾರಣವಾಗಿರುವ ಘಟನೆ ನಡೆದಿರುವುದು ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಗಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕಾದ ತಂದೆಯಾದವನೇ ಮಗಳಿಗೆ ಕಿರುಕುಳ ಕೊಟ್ಟಿದ್ದು ಕೂಡಲೇ ತನ್ನ ಗಂಡನನ್ನು ಬಂಧಿಸಬೇಕೆಂದು ಆರೋಪಿಯ ಪತ್ನಿ ಒತ್ತಾಯಿಸಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಕಳೆದ ಒಂದು ತಿಂಗಳ ಹಿಂದೆ ನಾಗಾರ್ಜುನ ಕಾಲೇಜಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪಿ. ಚೇತನ ನಗರದ ಎಲೆಪೇಟೆ ಬಾಡಿಗೆ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಎಲ್ಲರೂ ಮೊದಲು ಮಾನಸಿಕ ಸಮಸ್ಯೆಯಿಂದ ಚೇತನಾ ಸಾವನ್ನಪ್ಪಿರಬಹುದೆಂದು ತಿಳಿದುಕೊಂಡಿದ್ದರು. ಅದೇ ರೀತಿ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಮಗಳ ಸಾವಿಗೆ ಕಾರಣವಾಗಿರುವ ತನ್ನ ಗಂಡ ಪಾಂಡುರಂಗನ (48) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೃತಳ ತಾಯಿ ಶಕುಂತಲಾ ಜನರ ನೆರವಿನೊಂದಿಗೆ ಪೊಲೀಸ್ ಠಾಣೆಗ ಬಂದು ಆರಕ್ಷಕ ವೃತ್ತ ನಿರೀಕ್ಷಕ ಬಾಲಾಜಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಘಟನೆ ವಿವರ; ತನ್ನ ಗಂಡನಾದ ಪಾಂಡುರಂಗ ತನ್ನ ಮಗಳು ಸ್ನಾನ ಮಾಡುವಾಗಲೆಲ್ಲಾ ಮೊಬೈಲ್ನಲ್ಲಿ ಬೆತ್ತಲೆ ದೃಶ್ಯಗಳ ಚಿತ್ರೀಕರಣ ಮಾಡುತ್ತಿದ್ದ. ಅಲ್ಲದೇ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಅನೇಕ ಬಾರಿ ಮನೆಯಲ್ಲಿ ಗಲಾಟೆ ನಡೆದಿದ್ದು ತಾವು ಮತ್ತು ತಮ್ಮ ಮಗಳು ಮನೆಯಿಂದ ಹೊರಗೆ ಬಂದು ನಗರದ ಎಲೆಪೇಟೆಯಲ್ಲಿ ವಾಸ ಮಾಡುತ್ತಿದ್ದವು. ಆದರೂ ಆತ ಬೆಂಬಿಡದೇ ಬಂದು ಮಗಳಿಗೆ ಕಿರುಕುಳ ಕೊಡುತ್ತಿದ್ದ. ಈ ಹಿನ್ನೆಲೆಯಲ್ಲಿ ಬೇಸತ್ತ ತಮ್ಮ ಮಗಳು ನ.28 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ತನ್ನ ಕಾಮುಕ ಗಂಡ ಪಾಂಡುರಂಗನೇ ಕಾರಣ ಎಂದು ಪತ್ನಿ ಶಕುಂತಲ ಆರೋಪಿಸಿದ್ದಾರೆ.
ಅಲ್ಲದೇ ಮಗಳ ನಿಧನದ ಜತೆಗೆ ಭಯದಿಂದ ಮೊದಲು ದೂರು ಕೊಡಲಾಗಲಿಲ್ಲ. ಆದರೆ, ಸಮಾಜದಲ್ಲಿ ಮುಂದೆ ಇಂತಹ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಈಗ ದೂರು ಕೊಡುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಕೂಡಲೇ ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಮಹಿಳಾ ಮುಖಂಡರು ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಬಾಲಾಜಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸತ್ಯವತಿ, ಚಂದ್ರಶೇಖರ್, ಶ್ರೀಧರ್, ಅನಿಲ್ ಕುಮಾರ್, ಅನುರಾಧಾ, ಸೀತಾಲಕ್ಷಿ ಉಪಸ್ಥಿತರಿದ್ದರು.