ಪಿಯು ಕಾಲೇಜಿಗೆ ನೀರಿನ ವ್ಯವಸ್ಥೆ
ಕೋಲಾರ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಗತ್ಯ ಅನುದಾನ ಮಂಜೂರು ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಭರವಸೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೆಲವು ದಿನಗಳ ಹಿಂದೆ ತಾವು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೌಚಾಲಯಗಳ ದುಸ್ಥಿತಿ ಗಮನಿಸಿ ಸುಧಾರಣೆಗಾಗಿ 2 ಲಕ್ಷ ಮಂಜೂರಾತಿ ಮಾಡಿಸಿದ್ದೇನೆಂದರು.
ಕಾಲೇಜಿನಲ್ಲಿ ಸುಮಾರು 1300 ವಿದ್ಯಾರ್ಥಿಗಳಿದ್ದಾರೆ. ತರಗತಿಗಳ ನಡೆಸಲು ಕಟ್ಟಡದ ಸಮಸ್ಯೆ ಇದೆ ಎಂದು ಕಾಲೇಜಿನ ಅಭಿವೃದ್ಧಿ ಸಮಿತಿಯವರು ತಿಳಿಸಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾವು ಮುಂದಿನ ದಿನಗಳಲ್ಲಿ ಕಾಲೇಜಿನ ಕಟ್ಟಡ ನಿರ್ಮಾಣಕ್ಕೂ ಕೈಲಾದಷ್ಟು ಅನುದಾನ ನೀಡುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಿವಿಮಾತು: ದ್ವಿತೀಯ ಪಿಯುಸಿ ಎಂಬುದು ಪ್ರತಿಯ ವಿದ್ಯಾರ್ಥಿಯ ಬದುಕಿನ ಕಾಲಘಟ್ಟ ನಿರ್ಣಯ ಮಾಡುವುದರಿಂದ ಗುರಿ ಮತ್ತು ಛಲದೊಂದಿಗೆ ಓದಿ ಉತ್ತಮ ಅಂಕ ಪಡೆಯಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎನ್.ರಾಜಣ್ಣ ಮಾತನಾಡಿ, ತರಗತಿಗಳು ನಡೆಯಲು ಕಟ್ಟಡದ ಸಮಸ್ಯೆ ಇದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಶಾಸಕ ವರ್ತೂರ್ ಪ್ರಕಾಶ್ 4 ಕೋಟಿ ಮಂಜೂರು ಮಾಡಿಸಿದ್ದರಾದರೂ ಆಗಿನ ಸರ್ಕಾರ ಬಜೆಟ್ನಲ್ಲಿ ಪಿಯು ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ನಿಗದಿ ಪಡಿಸದ ಕಾರಣ ಯೋಜನೆ ಕೈಗೂಡಲಿಲ್ಲ. ಕ್ಷೇತ್ರದ ಶಾಸಕರ ಸಹಾಯದಿಂದ ಹೇಗಾದರೂ ಮಾಡಿ ಕಟ್ಟಡ ನಿರ್ಮಿಸುವುದಾಗಿ ಹೇಳಿದರು.
ನಗರಸಭೆ ಸದಸ್ಯ ಮುಬಾರಕ್ ಮಾತನಾಡಿ, ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದರೆ ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಅನುಕೂಲವಾಗುತ್ತದೆ. ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಹೆತ್ತವರಿಗೆ, ಗುರುಗಳಿಗೆ ಒಳ್ಳೆ ಹೆಸರು ತರುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿ ಎಂದರು.
ಜಿಲ್ಲಾ ಪಿಯು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದೊರೆಸ್ವಾಮಿ, ಕನ್ನಡ ಉಪನ್ಯಾಸಕ ಮುನಿರಾಜು, ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಸರ್ಕಾರಿ ಪಿಯು ಬಾಲಕರ ಕಾಲೇಜಿನ ಮುನಿಕೃಷ್ಣಪ್ಪ ವೇದಿಕೆಯಲ್ಲಿದ್ದರು.
ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಕ್ಕಳು ನಡೆಸಿಕೊಟ್ಟ ಜನಪದ ನೃತ್ಯ, ಭರತ ನಾಟ್ಯ ಸೊಗಸಾಗಿತ್ತು. ಕಾಲೇಜಿನ ಉಪನ್ಯಾಸಕ ಗೋಪಿಕೃಷ್ಣ ನಿರೂಪಿಸಿ, ಟಿ.ಚಂದ್ರಪ್ಪ ಸ್ವಾಗತಿಸಿದರು.