ಸಂತಾಪ
ಕೋಲಾರ: ಪತ್ರಿಕಾ ಪ್ರಸರಣ ವಿಭಾಗದ ವ್ಯವಸ್ಥಾಪಕ ಬಿ. ರೇಣುಕಾ ಪ್ರಸಾದ್ ಅವರ ನಿಧನಕ್ಕೆ ಕೋಲಾರ ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಸಂತಾಪ ವ್ಯಕ್ತಪಡಿಸಿದೆ. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಜಯವಾಣಿ ಪತ್ರಿಕೆಯ ಪ್ರಸರಣ ವಿಭಾಗದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ರೇಣುಕಾ ಪ್ರಸಾದ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ರಮೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸಶೆಟ್ಟಿ, ಉಪಾಧ್ಯಕ್ಷ ಸಿ. ರಮೇಶ್, ಕಾರ್ಯದರ್ಶಿ ಎನ್. ಮಂಜುನಾಥ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್, ರಾಜ್ಯ ಸಮಿತಿ ಸದಸ್ಯ ವಾಸುದೇವಹೊಳ್ಳ ಇದ್ದರು.
ಸಾಂಸ್ಕೃತಿಕ ಸಂಜೆ
ಕೋಲಾರ: ಬಂಗಾರಪೇಟೆಯ ಕನ್ನಡ ಸಂಘದಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಡಿ.30 ಮತ್ತು 31 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಲ್ಲಿವಿ ಮಣಿ ತಿಳಿಸಿದ್ದಾರೆ. ಡಿ.30 ರಂದು ಸೋಮವಾರ ಸಂಜೆ 6.30ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ಮಿಮಿಕ್ರಿ ಕಲಾವಿದ ದಯಾನಂದ್ ಮತ್ತು ತಂಡದವರಿಂದ ಹಾಸ್ಯ ರಸ ಸಂಜೆ, ಡಿ.31ರಂದು ಮಂಗಳವಾರ ಸಂಜೆ 6.30ಕ್ಕೆ ನ್ಯೂ ಇಂಡಿಯನ್ ಡ್ಯಾನ್ಸ್ ಇನ್ಸ್ಟ್ಯೂಟ್, ಶೈನಿಂಗ್ ಸ್ಟಾರ್ ಡ್ಯಾನ್ಸ್ ಇನ್ಸ್ಟ್ಯೂಟ್ ಮತ್ತು ಅನ್ನಪೂರ್ಣೇಶ್ವರಿ ನೃತ್ಯ ತಂಡ ಹಾಗೂ ಇಂಚರ ಮತ್ತು ಸಂಗಡಿಗರಿಂದ ಮೈ ನವಿರೇಳಿಸುವ ನೃತ್ಯ ಕಾರ್ಯಕ್ರಮ ಹಾಗೂ ಕೆಜಿಎಫ್ ಮಳಿಯಾಳಿ ಸಂಘದವರಿಂದ ರಾಧಾಕೃಷ್ಣ ನೃತ್ಯ ರೂಪಕವನ್ನು ಹಮ್ಮಿಕೊಳ್ಳಲಾಗಿದೆ. ಬುಧುವಾರ ಸಂಜೆ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮನಿ ಅವರಿಂದ ನಗೆಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ತಂಬಿಹಳ್ಳಿ ಮಠದಿಂದ ನಾಳೆ ಪ್ರಶಸ್ತಿ ಪ್ರದಾನ
ಕೋಲಾರ: ತಾಲೂಕಿನ ತಂಬಿಹಳ್ಳಿಯ ಶ್ರೀಮನ್ಮಾಧವತೀರ್ಥ ಮೂಲ ಮಹಾಸಂಸ್ಥಾನದ 24ನೇ ಪೀಠಾಧಿಪತಿಗಳಾದ ಪ್ರಸನ್ನಶೂರ ಮಾಧವತೀರ್ಥರ ಸ್ಮರಣೆಯಲ್ಲಿ ಪ್ರತಿವರ್ಷ ಹಿರಿಯ ಪತ್ರಕರ್ತರೊಬ್ಬರಿಗೆ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಕೋಲಾರವಾಣಿ ಪತ್ರಿಕೆಯ ಸಂಸ್ಥಾಪಕರಾಗಿ ನಂತರ ಸನ್ಯಾಸಾಶ್ರಮ ಸ್ವೀಕರಿಸಿ ಶ್ರೀಮಠದ ಅಭಿವೃದ್ಧಿಗೆ ಕಾರಣೀಭೂತರಾದ ಪ್ರಸನ್ನಶೂರ ಮಾಧವತೀರ್ಥರ ಮಹಾ ಸಮಾರಾಧನೆ ಸಂದರ್ಭದಲ್ಲಿ ಪತ್ರಕರ್ತರೊಬ್ಬರನ್ನು ಸನ್ಮಾನಿಸಿ ಪತ್ರಿಕೋದ್ಯಮ ಭಾಸ್ಕರ ಪ್ರಶಸ್ತಿ ನೀಡಲು ಹಾಲಿ ಪೀಠಾಧಿಪತಿಗಳಾದ ವಿದ್ಯಾಸಾಗರ ಮಾಧವತೀರ್ಥರು ನಿರ್ಧರಿಸಿದ್ದು, ಪ್ರಶಸ್ತಿಯ ಮೊದಲ ಪುರಸ್ಕಾರಕ್ಕೆ ನಾಡಿನ ಹಿರಿಯ ಪತ್ರಕರ್ತ ಆರ್. ವೆಂಕಟನಾರಾಯಣರನ್ನು ಆಯ್ಕೆ ಮಾಡಲಾಗಿದೆ.