ಒಡವೆಗಳ ಬ್ಯಾಗ್ ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಆಟೋ ಚಾಲಕ
ಕೆಜಿಎಫ್: ಮಹಿಳೆಯೊಬ್ಬರು ಸುಮಾರು 3.40 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳಿದ್ದ ಬ್ಯಾಗನ್ನು ಆಟೋದಲ್ಲೇ ಮರೆತು ಹೋಗಿದ್ದು ಆಟೋ ಚಾಲಕ ಬ್ಯಾಗನ್ನು ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ತಮಿಳುನಾಡಿನ ರಾಣಿಪೇಟೆ ನಿವಾಸಿ ಮೋರ್ಲಿನ್ ಎಂಬವರು ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಸ್ವರ್ಣ ಪ್ಯಾಸೆಂಜರ್ ರೈಲ್ನಲ್ಲಿ ಬಂದು ಕೆಜಿಎಫ್ನ ಉರಿಗಾಂ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದು, ಅಲ್ಲಿಂದ ಅಂಬೇಡ್ಕರ್ ನಗರದ ತಮ್ಮ ತಂದೆಯ ಮನೆಗೆ ಹೋಗಲು ಆಟೋದಲ್ಲಿ ಹತ್ತಿ ಮನೆಯ ಬಳಿ ಇಳಿದು ಬ್ಯಾಗ್ನ್ನು ಆಟೋದಲ್ಲೇ ಮರೆತು ಹೋಗಿದ್ದರು. ನಂತರ ಗಾಭರಿಗೊಂಡ ಮೋರ್ಲಿನ್ ತಮ್ಮ ತಂದೆಗೆ ವಿಷಯ ತಿಳಿಸಿದ್ದು ಆಟೋ ಪತ್ತೆಹಚ್ಚಲು ಪರದಾಡುತ್ತಿದ್ದರು.
ಆಟೋ ಚಾಲಕ ಅಷ್ಟರಲ್ಲೇ ಬ್ಯಾಗ್ನ್ನು ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಚಾಲಕ ಅಶೋಕನ್ ಪ್ರಾಮಾಣಿಕತೆಗೆ ಪೊಲೀಸರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೋರ್ಲಿನ್ ಅವರು ಆಟೋ ಚಾಲಕನಿಗೆ 2 ಸಾವಿರ ರುಪಾಯಿಗಳ ನಗದನ್ನು ಬಹುಮಾನವಾಗಿ ವಿತರಿಸಿದರು.