ಚಿನ್ನಾಭರಣ ಕಳವು
ಕೆಜಿಎಫ್: ಮನೆಯ ಬಾಗಿಲನ್ನು ಕಬ್ಬಿಣದ ರಾಡ್ನಿಂದ ಮೀಟಿ ಒಳ ನುಗ್ಗಿದ ಕಳ್ಳರು ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆಗಳು ಹಾಗೂ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ರಾಬರ್ಟ್ ಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೊಯಿದು ಕಾಂಪ್ಲೆಕ್ಸ್ ಹಿಂಭಾಗದ ಬೌರಿಲಾಲ್ ಪೇಟೆ ಬಡಾವಣೆಯ ನಿವಾಸಿ ಫರಿನಾತಾಜ್ ಎಂಬವರ ಮನೆಯಲ್ಲಿಟ್ಟಿದ್ದ 35 ಗ್ರಾಂ ಚಿನ್ನದ ಒಡವೆಗಳು ಹಾಗೂ 52 ಸಾವಿರ ನಗದು ಸೇರಿದಂತೆ ಒಟ್ಟು 1.60 ಲಕ್ಷ ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿಕಟೋಚ್ ಸೆಫೆಟ್, ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ, ಪಿಎಸ್ಐ ರಂಗಶಾಮಯ್ಯ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.