ನಮೋ ಕೈ ಬಲಪಡಿಸಲು ಕರೆ
ಕೋಲಾರ: ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಬೇಕಾದರೆ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಮಾತ್ರ ಸಾಧ್ಯ ಎಂದು ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಪ್ರೇಮಲೀಲ ವೆಂಕಟೇಶ್ ಅಭಿಪ್ರಾಯಪಟ್ಟರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೋಲಾರ ನಗರ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಭಾರತೀಯ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವ, ಸಜ್ಜನ, ಸಹೃದಯಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದಲ್ಲಿ ದೇಶ ಮುನ್ನಡೆಯುತ್ತದೆ ಎಂದು ಹೇಳಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯೆ ಆಶಾರೆಡ್ಡಿ ಮಾತನಾಡಿ, ದೇಶದಲ್ಲಿ ಮೋದಿಯ ಅಲೆ ಬೀಸುತ್ತಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಆಸಕ್ತಿ ವಹಿಸಿ ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ನರೇಂದ್ರಮೋದಿಯವರ ಕೈ ಬಲಪಡಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ರತ್ನಮ್ಮ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜಳ, ನಗರ ಅಧ್ಯಕ್ಷೆ ಶಕುಂತಲಾ ದಿಕ್ಷಿತ್, ಪ್ರಧಾನ ಕಾರ್ಯದರ್ಶಿ ಅರುಣಜ್ಯೋತಿ, ಜಿಲ್ಲಾ ಉಪಾಧ್ಯಕ್ಷೆ ವಿಜಯಲಕ್ಷಿ, ನಗರ ಘಟಕ ಉಪಾಧ್ಯಕ್ಷೆ ಮಂಜುಳಾದೇವಿ, ನಗರ ಘಟಕದ ಉಪಾಧ್ಯಕ್ಷೆ ಸರಸ್ವತಿ, ನೇತ್ರಾವತಿ, ಸಾವಿತ್ರಮ್ಮ ಇದ್ದರು.
ಕ್ರೀಡಾ ಸಾಮಗ್ರಿಗಳ ವಿತರಣೆ
ಕೋಲಾರ: ಖ್ಯಾತ ಗಾಯಕ ದಿ.ಸಿ. ಅಶ್ವಥ್ ಅವರ ಹುಟ್ಟು ಹಬ್ಬವನ್ನು ನಗರದಲ್ಲಿ ಭಾನುವಾರ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಸಿ. ಅಶ್ವಥ್ ಅಭಿಮಾನಿಗಳ ಬಳಗದಿಂದ ನಗರದ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂತರಗಂಗೆ ವಿದ್ಯಾ ಸಂಸ್ಥೆಯ ಬುದ್ಧಿಮಾಂಧ್ಯ ಹಾಗೂ ಅಂಗವಿಕಲ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಸಿ. ಅಶ್ವಥ್ ಅಭಿಮಾನಿ ಬಳಗದ ಅಧ್ಯಕ್ಷ ಹಾಗೂ ಸ್ಪಂದನ ಗ್ರೂಫ್ ಮಾಲೀಕ ರಂಗನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಸುಬ್ರಮಣಿ, ಸತೀಶ್, ರಾಜೇಶ್, ನಾಗರಾಜ ಕೃಷ್ಣ ಹಾಜರಿದ್ದರು.