ನಾಗಕುಂಟೆಗೆ ಮುಕ್ತಿ ಎಂದು?
ಕೋಲಾರ ನಗರದ ಕಠಾರಿಪಾಳ್ಯದಲ್ಲಿನ ಪುರಾಣ ಪ್ರಸಿದ್ಧ ನಾಗರಕುಂಟೆಯನ್ನು ಅಭಿವೃದ್ಧಿಪಡಿಸಲು ಕಳೆದ ಒಂದು ವರ್ಷದ ಹಿಂದೆ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಗಿದ್ದರೂ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಪವಿತ್ರವಾದ ಜಲಸಂಗ್ರ ಕೇಂದ್ರವಾದ ನಾಗರಕುಂಟೆ ಕಸದ ತೊಟ್ಟಿಯಾಗಿ ಪರಿವರ್ತನೆ ಆಗುತ್ತಿದೆ.
ಕಳೆದ ಐದಾರು ವರ್ಷಗಳ ಹಿಂದೆಯೇ ನಾಗರಕುಂಟೆಯ ಅಬಿವೃದ್ಧಿಗಾಗಿ ನಗರಸಭೆಯು ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿಗೆ 74 ಲಕ್ಷ ರು. ಮೀಸಲಿಟ್ಟಿತ್ತಾದರೂ ಉದ್ದೇಶಿತ ಕಾಮಗಾರಿ ನಡೆಸಲಾಗಿಲ್ಲ. ಸುಮಾರು 2.50 ಲಕ್ಷ ರು. ಖರ್ಚು ಮಾಡಿ ಸ್ವಚ್ಛತಾ ಕಾರ್ಯ ನಡೆಸಿದ್ದು ಅಧಿಕಾರಿಗಳ ಅಸಡ್ಡೆ ಹಾಗೂ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಇರುವುದರಿಂದ ನಾಗರಕುಂಟೆ ಮತ್ತೆ ಕಸದ ತೊಟ್ಟಿಯಾಗುತ್ತಿರುವುದರಿಂದ ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಕೂಡಲೇ ವಿಶೇಷ ಸಭೆ ಕರೆದು ಸ್ಥಗಿತಗೊಂಡಿರುವ ಕಾಮಗಾರಿ ಮುಗಿಸಬೇಕು.
ಟಿ ಎಸ್.ಎನ್. ಪ್ರಕಾಶ್, ಕೋಲಾರ.
ಕಸದ ತೊಟ್ಟಿಯಾದ ರಸ್ತೆಗಳು
ಕೋಲಾರ ನಗರದ ಗೌರಿಪೇಟೆಯಲ್ಲಿ ಕಸ ವಿಲೇವಾರಿಗೆ ನಗರಸಭೆಯಿಂದ ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ ರಸ್ತೆಗೆ ಕಸವನ್ನು ಎಸೆಯುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ. ರಸ್ತೆಯಲ್ಲಿ ಘನ ತ್ಯಾಜ್ಯ ಹಾಕದಂತೆ ಸಂಬಂಧಪಟ್ಟ ಅಧಿಕಾರಿಗಳು ಜನತೆಯಲ್ಲಿ ಅರಿವು ಮೂಡಿಸುವುದರ ಜೊತೆಗೆ ಕಾನೂನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಿದಲ್ಲಿ ಸುಧಾರಣೆ ತರಬಹುದು.
ನಗರಸಭೆಯಿಂದ ಪ್ರತಿನಿತ್ಯ ಕಸ ವಿಲೇವಾರಿ ಸಾಧ್ಯವಾಗದಿದ್ದರೂ ಕನಿಷ್ಠ ಎರಡು ದಿನಕ್ಕೆ ಒಮ್ಮೆ ಕಡ್ಡಾಯವಾಗಿ ಕಸವನ್ನು ತೆರವು ಮಾಡಿಸಲು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು. ನಗರದ ಬಹುತೇಕ ಎಲ್ಲಾ ವಾರ್ಡುಗಳಲ್ಲಿ ಇದೇ ಪರಿಸ್ಥಿತಿ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ರೋಗ-ರುಜಿನ ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳು ಕಸ ವಿಲೇವಾರಿಗೆ ಜರೂರಾಗಿ ಸೂಕ್ತ ವ್ಯವಸ್ಥೆ ಮಾಡಬೇಕು.
ಟಿ ಪೇಪರ್ ಮಂಜುನಾಥ್, ಕೋಲಾರ
ಅವೈಜ್ಞಾನಿಕ ವಾಲ್ವ್ ಗುಂಡಿ ಮುಚ್ಚಿ
ಮಾಲೂರು: ಇಲ್ಲಿನ ಆದರ್ಶ ನಗರದ ಅರಳೇರಿ ರಸ್ತೆಯ 2ನೇ ಅಡ್ಡರಸ್ತೆ ಸಮೀಪ ಪುರಸಭೆ ನೀರು ವಿತರಣೆ ವಿಭಾಗದವರು ಅವೈಜ್ಞಾನಿಕವಾಗಿ ರಸ್ತೆ ಪಕ್ಕದಲ್ಲೇ ತೆರೆದಿರುವ ವಾಲ್ವ್ ಗುಂಡಿ ದಿನ ನಿತ್ಯ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.
ಕೂಡಲೇ ಪುರಸಭೆಯವರು ಮೃತ್ಯುಕೂಪದಂತಿರುವ ಹಳ್ಳವನ್ನು ಮುಚ್ಚಬೇಕೆಂದು ಆದರ್ಶನಗರ ನಿವಾಸಿಗಳು ಒತ್ತಾಯಿಸಿದ್ದಾರೆ. ಆದರ್ಶನಗರ ಬಡಾವಣೆಯ ಅಡ್ಡರಸ್ತೆಗಳಿಗೆ ನೀರು ವಿತರಣೆಗಾಗಿ ವಾಲ್ವ್ ತಿರುಗಿಸಲು ತೆಗೆದಿರುವ ಈ ಹಳ್ಳ ಅವಶ್ಯಕತೆಕ್ಕಿಂತ ದೊಡ್ಡದಾಗಿದೆ. ಅಲ್ಲದೇ ರಸ್ತೆ ಪಕ್ಕದ ಮರದ ನೆರಳಿನಲ್ಲಿ ಇರುವುದರಿಂದ ಹಳ್ಳದ ಇರುವಿಕೆ ವಾಹನ ಚಾಲಕರು ಸೇರಿದಂತೆ ಪಾದಾಚಾರಿಗಳಿಗೆ ಕಾಣಿಸಿಸುವುದಿಲ್ಲ. ಬೈಕ್ ಸವಾರರು ಮುಗ್ಗರಿಸಿದರೆ, ಕಾರು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳ ಚಕ್ರಗಳು ಹಳ್ಳದಲ್ಲಿ ಇಳಿದು ಮೇಲೆತ್ತಲು ಹರ ಸಾಹಸ ಮಾಡಬೇಕಾಗಿದೆ. ಪುರಸಭೆಯ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವಾಲ್ವ್ ತಿರುಗಿಸುವ ಹಳ್ಳವನ್ನು ವೈಜ್ಞಾನಿಕವಾಗಿ ನಿರ್ಮಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಆದರ್ಶ ನಗರದ 2 ನೇ ಅಡ್ಡರಸ್ತೆಯ ನಿವಾಸಿಗಳು ಕೋರಿದ್ದಾರೆ.
ಟಿ ಎಂ. ಉದಯ್ಕುಮಾರ್, ಆರ್. ಮಂಜುನಾಥ್
ತಡೆ ಗೋಡೆ ನಿರ್ಮಿಸಿ
ಕೋಲಾರ-ಬಂಗಾರಪೇಟೆ ಬೈಪಾಸ್ ರಸ್ತೆಯ ಬಳಿಯ ಸೇತುವೆ ಕೆಳಗೆ ಹಾದು ಹೋಗಿರುವ ರೇಲ್ವೆ ಹಳಿಯ ಅಜು-ಬಾಜಿನಲ್ಲಿ ತಡೆ ಗೋಡೆ ನಿರ್ಮಿಸದಿದ್ದರೆ ಸಾಕಷ್ಟು ಜನರ ಪ್ರಾಣಕ್ಕೆ ಕುತ್ತು ಉಂಟಾಗಬಹುದು.
ಇತ್ತೀಚೆಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ರೈಲು ಹಳಿ ದಾಟುವಾಗ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಸತ್ತಿದ್ದಾರೆ, ಈ ಜಾಗದಲ್ಲಿ ಸಿಗ್ನಲ್ಲೈಟ್ ವ್ಯವಸ್ಥೆ ಮಾಡಿಲ್ಲ, ಸಾರ್ವಜನಿಕರಿಗೆ ಎಚ್ಚರಿಕೆ ನೀಡುವುದಕ್ಕೆ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ, ರೈಲು ಹಳಿ ದಾಟದಿರಲು ತಡೆ ಗೋಡೆ ನಿರ್ಮಿಸಿಲ್ಲ.
ರೇಲ್ವೆ ಇಲಾಖೆಯವರು ಕೋಟ್ಯಂತರ ರುಪಾಯಿ ಖರ್ಚು ಮಾಡಿ ರೈಲು ಹಳಿ ನಿರ್ಮಾಣ ಮಾಡಿದ್ದು, ಜನತೆಯ ಪ್ರಾಣ ರಕ್ಷಣೆಗಾಗಿ ತಡೆ ಗೋಡೆ ಇಲ್ಲವೇ ಇನ್ಯಾವುದಾದರೊಂದು ರಕ್ಷಣಾ ವ್ಯವಸ್ಥೆ ಮಾಡಿ ಮುಂದಿನ ದಿನಗಳಲ್ಲಿ ಯಾವುದೇ ಅಪಾಯ ತಲೆದೂರದಂತೆ ಎಚ್ಚರ ವಹಿಸಬೇಕು.
ಟಿ ಗಂಗಾಧರ್, ಕೋಲಾರ