ಬೂದಿಮಯವಾಗುತ್ತಿರುವ ಉಪ್ಪು ಕೆರೆ
ಬಂಗಾರಪೇಟೆ: ತಾಲೂಕಿನ ಕೀಲುಕುಪ್ಪ ಗ್ರಾಮದ ಉಪ್ಪುಕೆರೆಯಲ್ಲಿ ಪ್ರತಿನಿತ್ಯ ಅಕ್ಕಿ ಗಿರಣಿಗಳಿಂದ ಸಂಗ್ರಹವಾಗುವ ವಿಷ ಪೂರಿತ ಬೂದಿಸುರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.
ಕೆರೆಗಳ ತವರೂರಾದ ಬಂಗಾರಪೇಟೆ ತಾಲೂಕಿನಲ್ಲಿರುವ ನೂರಾರು ಕೆರೆಗಳು ಇಂದು ಒಣಗಿವೆ, ಇದರ ಸಾಲಿಗೆ ಕೂಲುಕುಪ್ಪ ಗ್ರಾಮದ ಉಪ್ಪುಕೆರೆ ಸೇರ್ಪಡೆಯಾಗಿದೆ. ಕೆರೆಯಲ್ಲಿ ತುಂಬಿರುವ ಹೂಳನ್ನು ಎತ್ತಿ ಮಳೆ ಬಂದರೆ ನೀರು ನಿಲ್ಲುವಂತೆ ಮಾಡುವ ಯಾವುದೇ ಕೆಲಸವನ್ನು ಪಂಚಾಯ್ತಿ ಕೈಗೊಂಡಿಲ್ಲದ ಕಾರಣ ಕೆರೆ ಪಟ್ಟಣದ ತ್ಯಾಜ್ಯ ವಸ್ತುಗಳ ಸಂಗ್ರಹದ ಗೂಡಾಗಿ ಬದಲಾಗಿದೆ. ಇದಕ್ಕೆ ಅಕ್ಕಿ ಗಿರಣಿ ಮಾಲೀಕರೂ ಪ್ರತಿದಿನ ಸಂಗ್ರಹವಾಗುವ ಬೂದಿಯನ್ನು ತಂದು ಎಸೆಯುತ್ತಿದ್ದಾರೆ. ಕೆರೆಯಲ್ಲಿ ಬೂದಿ ತುಂಬಿರುವುದರಿಂದ ಗಾಳಿ ಬಂದರೆ ಬೈಕ್ ಸವಾರರ ಕಣ್ಣಿಗೆ ಬೀಳುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳು ಪ್ರಶ್ನಿಸುವ ಕೆಲಸ ಮಾಡಿಲ್ಲ. ಗಿರಣಿ ಮಾಲೀಕರು ಬೂದಿ ತುಂಬುತ್ತಿರುವುದರಿಂದ ಒತ್ತುವರಿದಾರರಿಗೆ ಅನುಕೂಲವಾಗಿದ್ದು, ಕೆರೆಯಲ್ಲಿ ಕೆಲವರು ಕಲ್ಲು ನೆಟ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಂಚಾಯ್ತಿಯವರನ್ನು ಕೇಳಿದರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿಸುವುದಾಗಿ ಪಿಡಿಒ ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಅಂತರ್ಜಲ ವೃದ್ಧಿಸಲು ಆಸಕ್ತಿ ಹೊಂದಿದ್ದು ಮುಚ್ಚಿ ಹೋಗುತ್ತಿರುವ ಉಪ್ಪು ಕೆರೆಯನ್ನು ರಕ್ಷಿಸಿಸಲು ಮುಂದಾಗುವರೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.