ಶಾಶ್ವತ ನೀರಾವರಿಗೆ ಆಗ್ರಹಿಸಿ ಬೆಂಗಳೂರು ಚಲೋ
ಮಾಲೂರು: ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಮುಳಬಾಗಲಿನ ಗಡಿಭಾಗದಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ ಸಾವಿರಾರು ಕಾರ್ಯಕರ್ತರೊಡನೆ ಪಾದಯಾತ್ರೆಯನ್ನು ಮುಂದಿನ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ ಹೇಳಿದರು.
ಇಲ್ಲಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ಸ್ಥಳೀಯ ಜನಪರ ವೇದಿಕೆ ಕದಂಬ ಸೇವಾ ಟ್ರಸ್ಟ್ನ ಸಹಕಾರದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ಡಾ. ವಿಷ್ಣು ವರ್ಧನ್ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಶಾಶ್ವತ ನೀರಾವರಿ ಕೊಗು ಕೇಳಿಸುತ್ತಿಲ್ಲ. ಅವರಿಗೆ ಕನ್ನಡಿಗರ ಮತ ಬೇಕೆ ಹೂರತು ಅವರಿಗೆ ಸೌಲಭ್ಯ ಕಲ್ಪಿಸುವ ಕಳಕಳಿ ಇಲ್ಲ ಎಂದ ಇದನ್ನು ವಿರೋಧಿಸಿ ಜನವರಿ ತಿಂಗಳಲ್ಲಿ ಪಾದಯಾತ್ರೆ ಸೇರಿದಂತೆ ಹಂತಹಂತವಾಗಿ ಹೋರಾಟ ನಡೆಸುವುದಾಗಿ ಹೇಳಿದರು.
ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕನ್ನಡ ಹರೀಶ್ ಮಾತನಾಡಿ, ನಾಯಕರ ರಾಜಕೀಯ ಆಟಕ್ಕಾಗಿ ಸಂಘಟನೆಗಳನ್ನು ಬಲಿಪಶುಮಾಡುತ್ತಿದ್ದು, ಕನ್ನಡ ಸಂಘಟನೆಗಳು ಎಚ್ಚರದಿಂದ ಇರಬೇಕು ಎಂದರು. ಕದಂಬ ಸೇವಾ ಟ್ರಸ್ಟ್ ನ ಡಾ.ಕೆ. ನಾಗರಾಜ್ ಮಾತನಾಡಿದರು. ಇದೇ ಸಂಧರ್ಭದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 63 ಬಾಟಲು ರಕ್ತವನ್ನು ಸಂಗ್ರಹಿಸಲಾಯಿತು. ಉಚಿತ ಆರೋಗ್ಯ ತಪಾಸಣೆಯಲ್ಲಿ 170 ಮಂದಿ ಬಾಗವಹಿಸಿ ಉಚಿತ ಚಿಕಿತ್ಸೆ ಪಡೆದರು. ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ಗೌಡರನ್ನು ಇದೇ ಸಂಧರ್ಭದಲ್ಲಿ ತಾಲೂಕು ಘಟಕ ಪಂಚಲೋಹದ ಕತ್ತಿ ನೀಡಿ, ಮೈಸೂರು ಪೇಟ ತೊಡಿಸಿ ಕನ್ನಡ ಕುಲ ತಿಲಕ ಬಿರುದು ನೀಡಿ ಗೌರವಿಸಿದರು. ಸಂಘದ ತಾಲೂಕು ಅಧ್ಯಕ್ಷ ಬಚ್ಚೇಗೌಡ, ಕದಂಬ ಟ್ರಸ್ಟ್ನ ಡಾ. ವೆಂಕಟಕೃಷ್ಣಯ್ಯ, ಕಾರ್ಯಾಧ್ಯಕ್ಷ ಮಾ.ಕೃ. ಸುರೇಶ್, ಹುಂಗೇನಹಳ್ಳಿ ಮಾರೇಶ್, ನಗರಾಧ್ಯಕ್ಷ ಲೋಹಿತ್ಗೌಡ, ಉಪಾಧ್ಯಕ್ಷ ನವೀನ್ಗೌಡ, ನಾಗೇಶ್ಗೌಡ, ಮಾಸ್ತಿ ರವಿ ಇದ್ದರು.