ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಧರಣಿ
ಕೋಲಾರ: ಬಾಕಿ ವೇತನ ಮತ್ತು ಭತ್ಯೆ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಿವೃತ್ತ ಅಧಿಕಾರಿಯೊಬ್ಬರು ಕೋಲಾರದ ಅರಣ್ಯ ಅಭಿವೃದ್ಧಿ ನಿಗಮದ ಎದುರು ಸೋಮವಾರ ಧರಣಿ ನಡೆಸಿದರು.
ನಿವೃತ್ತಿಯಾಗಿ ಒಂದೂವರೆ ವರ್ಷವಾಗಿದ್ದರೂ ಬಾಕಿ ಮೊತ್ತವನ್ನು ಪಾವತಿಸಲು ಇಲಾಖೆಯು ನಿರ್ಲಕ್ಷ್ಯ ತೋರಿದೆ. ಆರ್ಥಿಕ ಮುಗ್ಗಟ್ಟಲ್ಲಿರುವ ತಮ್ಮ ಕುಟುಂಬದ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ನಿವೃತ್ತ ಅಧಿಕಾರಿ ಜವರೇಗೌಡ ಅಳಲು ತೋಡಿಕೊಂಡರು. ನಿಗಮದಲ್ಲಿ 33 ವರ್ಷಗಳ ಸೇವೆಯನ್ನು ಮಾಡಿ ನಿವೃತ್ತಿಯಾಗಿರುವ ತಮಗೆ ಬಾಕಿ ಮೊತ್ತದ ಪೈಕಿ ಎರಡೂವರೆ ಲಕ್ಷ ರು.ಗಳನ್ನು ಇದುವರೆಗೂ ಪಾವತಿ ಮಾಡಿಲ್ಲ. ಈ ವಿಚಾರವಾಗಿ ನಿಗಮದ ಎಲ್ಲ ಹಂತದ ಅಧಿಕಾರಿಗಳನ್ನು ಭೇಟಿಯಾಗಿ ಮಾಡಿಕೊಂಡಿದ್ದರೂ ಪ್ರಯೋಜನವಾದ ಕಾರಣ ಧರಣಿ ನಡೆಸುತ್ತಿರುವುದಾಗಿ ಜವರೇಗೌಡ ತಿಳಿಸಿದರು. ಮಂಡ್ಯ ಮೂಲದ ಜವರೇಗೌಡ ಅವರು, ಪ್ರಸ್ತುತ ಬೆಂಗಳೂರು ನಗರದಲ್ಲಿ ಪತ್ನಿ ಜೊತೆಯಲ್ಲಿ ವಾಸ ಮಾಡುತ್ತಿದ್ದಾರೆ. ನಿಗಮದಿಂದ ಬರಬೇಕಾದ ಬಾಕಿ ಹಣಕ್ಕಾಗಿ ಕೋಲಾರ, ಶಿವಮೊಗ್ಗಕ್ಕೆ ಒಂದೂವರೆ ವರ್ಷದಿಂದಲೂ ಓಡಾಡಲು ಸಾಕಷ್ಟು ಹಣ ವ್ಯಯಿಸಿದ್ದಾರೆ. ಆದರೂ ನಿಗಮದ ಮೇಲಾಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲವೆಂಬ ಆರೋಪ ಇವರದ್ದಾಗಿದೆ.
ನಿಗಮದ ಕೋಲಾರ ಕಚೇರಿಯ ಮುಂದೆ ಜವರೇಗೌಡ ಅವರು ಮಧ್ಯಾಹ್ನದವರೆಗೂ ಧರಣಿ ನಡೆಸಿದರು. ನಂತರ ಸ್ಥಳಕ್ಕೆ ಬಂದ ನಿಗಮದ ವಿಭಾಗೀಯ ವ್ಯವಸ್ಥಾಪಕ ಜನಾರ್ದನ ಅವರು ನಾಲ್ಕೈದು ದಿನದ ಒಳಗಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಕೊಟ್ಟ ನಂತರ ಜವರೇಗೌಡ ಅವರು ಸ್ವಯಿಚ್ಛೆಯಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.