ಇದ್ದೂ ಇಲ್ಲದಂತಾಗಿರುವ ನಗರಸಭೆ
ಕೋಲಾರ: ಇಲ್ಲಿನ ನಗರಸಭೆಗೆ ಚುನಾವಣೆ ನಡೆದು ವರ್ಷ ಕಳೆಯುತ್ತಾ ಬಂದರೂ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಸೊರಗುವಂತಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ನಗರಸಭೆ ಮತ್ತು ಪುರಸಭೆಗಳಿಗೆ ಚುನಾವಣೆ ನಡೆದಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ಮೀಸಲಾತಿ ಪ್ರಕಟಿಸಲು ವಿಳಂಬ ಮಾಡಿದ್ದರಿಂದ ಚುನಾವಣೆ ಕಗ್ಗಂಟಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಮೇಲೆ ಮೀಸಲಾತಿಯನ್ನು ನ್ಯಾಯ ಸಮ್ಮತವಾಗಿ ಪ್ರಕಟಿಸಿ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳ ಆಡಳಿತ ಅನುಷ್ಟಾನಕ್ಕೆ ತರಬಹುದಾಗಿತ್ತು. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ವರ್ಗವಾರು ಮೀಸಲಾತಿ ಪಟ್ಟಿಯಲ್ಲಿ ಗೊಂದಲ ಮೂಡಿಸಿರುವುದರಿಂದ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದರಿಂದ ಕೋಲಾರ ಸೇರಿದಂತೆ ಅನೇಕ ಕಡೆ ಕಳೆದ ಹತ್ತು ತಿಂಗಳಿಂದ ಚುನಾಯಿತ ಸದಸ್ಯರ ಅಧಿಕಾರ ಮತ್ತು ಹಕ್ಕಿಗೆ ಕಿಮ್ಮತ್ತು ಇಲ್ಲದಂತಾಗಿದೆ.
ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸರಿಯಾದ ದಾಖಲೆಗಳನ್ನು ನೀಡದೆ ವಿಳಂಬ ಮಾಡುತ್ತಿರುವುದರಿಂದ ಜನಪ್ರತಿನಿಧಿಗಳು ಇದ್ದು ಇಲ್ಲದಂತಾಗಿದೆ, ಜತೆಗೆ ಸಾರ್ವಜನಿಕರು ಅಗತ್ಯ ಮೂಲ ಸೌಕರ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ, ಒಳಚರಂಡಿ ಹಾಗೂ ನಗರ ವ್ಯಾಪ್ತಿಯಲ್ಲಿ ಬಡವರಿಗೆ ವಸತಿ ಸೌಕರ್ಯ ಸೇರಿದಂತೆ ಇನ್ನಿತರ ಅನುಕೂಲ ಕಲ್ಪಿಸುವುದು ನಗರಸಭೆಯ ಕರ್ತವ್ಯವಾಗಿದೆ. ಆದರೆ, ಜನರ ಬೇಡಿಕೆಗಳನ್ನು ಅರಿತು ಯಾವುದೇ ಮೊದಲ ಆಧ್ಯತೆ ನೀಡಬೇಕೆಂಬುದು ತಿಳಿಯಲಾಗದೆ ಅಧಿಕಾರಿಗಳು ಧರ್ಮ ಸಂಕಟಕ್ಕೆ ಸಿಲುಕಿರುವುದರಿಂದ ನಗರಸಭೆ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ.
ಡಿಸಿ ಪರಿಶೀಲಿಸಲಿ: ಜನಪ್ರತಿನಿಧಿಗಳ ಸಭೆ ಕರೆಯಲಾಗುತ್ತಿಲ್ಲ, ಅನೌಪಚಾರಿಕವಾಗಿಯಾದರೂ ಸದಸ್ಯರೊಂದಿಗೆ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿಲ್ಲ, ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಇತ್ಯರ್ಥವಾಗಿಲ್ಲವೆಂಬ ನೆಪ ಹೇಳಿ ಸದಸ್ಯರನ್ನು ಕತ್ತಲ್ಲಿನಲ್ಲಿಟ್ಟು ಅಧಿಕಾರಿಗಳೇ ಎಲ್ಲಾ ನಿರ್ಣಯಗಳನ್ನು ಕೈಗೊಂಡರೆ ಪಾರದರ್ಶಕತೆಗೆ ಅರ್ಥ ಸಿಗುವುದಾದರೂ ಹೇಗೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಎಲ್.ಆರ್.ಮುರಳಿಗೌಡ ಪ್ರಶ್ನಿಸಿದ್ದಾರೆ.
ಜನರಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಚುನಾಯಿತ ಸದಸ್ಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ತಾತ್ಸಾರ ಮಾಡಲಾಗುತ್ತಿದೆ, ಕನಿಷ್ಟ ಎರಡು ತಿಂಗಳಿಗೆ ಒಮ್ಮೆ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಆಡಳಿತಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ನಗರಸಭೆಗೆ ಆಗಾಗ ಭೇಟಿ ನೀಡಿ ಆಡಳಿತಕ್ಕೆ ಚುರುಕು ಮುಟ್ಟಿಸಬೇಕು, ಅಧಿಕಾರಿಗಳನ್ನು ಡಿಸಿ ಕಚೇರಿಗೆ ಕರೆಸಿಕೊಂಡು ಚರ್ಚಿಸಿದರೆ ಏನು ಪ್ರಯೋಜನವಿಲ್ಲ, ನಗರಸಭೆಯಲ್ಲೇ ಕುಳಿತು ಕಡತಗಳ ಪರಿಶೀಲನೆ ಮಾಡಿದಲ್ಲಿ ನಗರಸಭೆಯ ಬಂಡವಾಳ ಬಯಲಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಜನರಿಗೆ ಮಾಹಿತಿ ನೀಡಲಿ: ನಗರಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ಅಧಿಕಾರ ಜನರಿಗಿದೆ. ಚುನಾವಣೆ ನಡೆದು ಹತ್ತು ತಿಂಗಳಾಗುತ್ತಿದ್ದರೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ, ನ್ಯಾಯಾಲಯದಲ್ಲಿರುವ ಇರುವ ಪ್ರಕರಣ ಇತ್ಯರ್ಥಕ್ಕೆ ಸರ್ಕಾರ ಗಮನ ನೀಡಬೇಕು, ಜೊತೆಗೆ ಇಲ್ಲಿನ ಅಧಿಕಾರಿಗಳು ಸಹ ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಿ ಜನತೆಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಯತ್ನಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮರಾಜು ಆಗ್ರಹಿಸಿದ್ದಾರೆ.
ಕೋಲಾರ ನಗರಸಭೆಗೆ ಇತಿಹಾಸದಲ್ಲೇ ಎಂದೂ ಸಿಗದಷ್ಟು ಅನುದಾನವನ್ನು ಈ ಹಿಂದಿನ ಸರ್ಕಾರ ನೀಡಿದೆ, ಸುಮಾರು 100 ಕೋಟಿಗೂ ಹೆಚ್ಚು ಅನುದಾನ ವಿವಿಧ ಯೋಜನೆಗಳಡಿ ಬಿಡುಗಡೆ ಆಗಿದೆ. ಆರು ವರ್ಷಗಳಲ್ಲಿ ನಗರದಲ್ಲಿ ಆಗಿರುವ ಅಭಿವೃದ್ಧಿ ಕೆಲಸ, ಅದಕ್ಕೆ ಆಗಿರುವ ಖರ್ಚು, ಕಾಮಗಾರಿಗಳ ಗುಣಮಟ್ಟ, ತೆರಿಗೆ ಸಂಗ್ರಹಣೆಯಲ್ಲಿನ ಪ್ರಗತಿ ಹೇಗೆ ಅನೇಕ ವಿಚಾರಗಳ ಬಗ್ಗೆ ತಿಳಿಯುವ ಹಕ್ಕು ಜನರಿಗೆ ಇರುವುದರಿಂದ ಕೂಡಲೇ ವಿಶೇಷ ಸಭೆಯನ್ನು ಕರೆದು ಚರ್ಚಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕೆಂದು ತಿಳಿಸಿದ್ದಾರೆ. ನಗರಸಭೆಯ ಆಡಳಿತ ಮತ್ತು ಜನತೆಯ ಸಮಸ್ಯೆಗಳ ಕುರಿತು ತಾವು ಶೀಘ್ರವೇ ಜೆಡಿಎಸ್ ಸದಸ್ಯರೊಟ್ಟಿಗೆ ಚರ್ಚಿಸಿ ಅಗತ್ಯ ಬಿದ್ದರೆ ಮಾಜಿ ಮುಖ್ಯಮಂತ್ರಿ,ವಿರೋಧಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು.