ಕನ್ನಡದ ಅಭಿವೃದ್ಧಿಗೆ ಅಪಾರ ಶ್ರಮ ವಹಿಸಿದ್ದ ಕುವೆಂಪು'
ಕೆಜಿಎಫ್: ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಕವನ ಸಾಹಿತ್ಯ ಕಾದಂಬರಿಗಳು ಮತ್ತು ಕರ್ನಾಟಕ ರಾಜ್ಯದಲ್ಲಿ ಕನ್ನಡದ ಅಭಿವೃದ್ಧಿಗೆ ಅವರ ಶ್ರಮ ಅಪಾರವಾದದ್ದು ಈ ಬಗ್ಗೆ ಇಂದಿನ ವಿದ್ಯಾರ್ಥಿಗಳು ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಮತ್ತು ಅವರ ತತ್ವ ಸಿದ್ಧಾಂತಗಳನ್ನು ಪರಿಪಾಲಿಸಬೇಕು ಎಂದು ಕ್ಯಾಸಂಬಳ್ಳ ಗ್ರಾಮದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕಿ ಎಂ.ಕೆ. ಶಶಿಕಲಾ ಹೆಳಿದರು. ಕೆಜಿಎಫ್ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರವೆಂಕಟಪ್ಪ ಅಧ್ಯಕ್ಷತೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂ.ಕೆ. ಶಶಿಕಲಾ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಶಾಲಾ ಮಕ್ಕಳಿಗೆ ಉಪನ್ಯಾಸವನ್ನು ನೀಡಿದರು. ಇದೇ ವೇಳೆ ಇತ್ತೀಚೆಗೆ ಮತ್ತೊಬ್ಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಮತ್ತು ಮೊರಾರ್ಜಿ ದೇಸಾಯಿ ಶಾಲಾ ಶಿಕ್ಷಕರು ಶ್ರದ್ಧಂಜಲಿ ಸಲ್ಲಿಸಿದರು. ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಮುಂತಾದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಹುಮಾನಗಳನ್ನು ವಿತರಿಸಿದರು. ನಂದನಿ ತಂಡದವರಿಂದ ಪ್ರಾರ್ಥನೆ, ಸೌಮ್ಯ ತಂಡದವರಿಂದ ನಾಡಗೀತೆ, ಬಿ.ವಿ. ದೇಶಪಾಂಡೆ, ಮಂಜುನಾಥ್ ಹೆಗಡೆ, ರಾಮಪ್ರಸಾದ್ ಇದ್ದರು.