ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಟೊಮೇಟೋ ಬೆಲೆ ಕುಸಿತ; ರೈತನಿಗೆ ಸಂಕಟ

Rashmi Kasaragodu
Updated On : 31 Dec 2013, 2:10 am

 ಪಾ.ಶ್ರೀ. ಅನಂತರಾಮ್
ಕೋಲಾರ: ಹೆಚ್ಚುತ್ತಿರುವ ಅವಕ ಹಾಗೂ ಹೊರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಟೊಮೇಟೋ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ಡಿಸೆಂಬರ್ನಿಂದ ಏಪ್ರಿಲ್ ವರೆಗೆ ಟೊಮೇಟೋ ಕಾಲವಲ್ಲ. ಆದರೆ, ಅತಿವೃಷ್ಟಿ ಅನಾವೃಷ್ಟಿ ಎಂಬಂತೆ ಕೋಲಾರ ಜಿಲ್ಲೆಯಲ್ಲಿ ಸಕಾಲವಲ್ಲದಿದ್ದರೂ ಟೊಮೇಟೋ ಹೆಚ್ಚು ಅವಕ ಕಾಣುತ್ತಿರುವುದರಿಂದ ರೈತರು ಎಪಿಸಿಎಂಸಿಗೆ ಸರಬರಾಜು ಮಾಡುತ್ತಿರುವ ಮಾಲಿಗೆ ಬೇಡಿಕೆ ಇಲ್ಲದಂತಾಗಿದೆ. ಟೊಮೇಟೋ ಕಾಲದಲ್ಲಿ ಪ್ರತಿನಿತ್ಯ ಮಾರುಕಟ್ಟೆಗೆ 200 ರಿಂದ 250 ಲೋಡ್ ಸರಕು ಬರುವುದು ವಾಡಿಕೆ, ಸಕಾಲವಲ್ಲದ ಸಂದರ್ಭದಲ್ಲಿ 20 ರಿಂದ 30 ಲೋಡ್ ಟೊಮೇಟೋ ಬಂದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಹಾಗೂ ಅಗತ್ಯವಿರುವ ಸಮೀಪದ ರಾಜ್ಯಗಳಿಗೆ ಸರಬರಾಜು ಮಾಡಬಹುದು. ಆದರೆ, ಪ್ರಸ್ತುತ 100 ರಿಂದ 120 ಲೋಡ್ ಟೊಮೇಟೋ ಮಾರುಕಟ್ಟೆಗೆ ಬರುತ್ತಿರುವುದರಿಂದ ಮಾಲು ಹೊತ್ತು ಬರುವ ರೈತರಿಗೆ ನ್ಯಾಯ ಒದಗಿಸಲು ವ್ಯಾಪಾರಿಗಳು ಮತ್ತು ದಲ್ಲಾಳಿಗಳಿಗೆ ಕಷ್ಟವಾಗುತ್ತಿದೆ.
ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಟೊಮೇಟೋ ಜ್ಯೂಸ್ ತಯಾರಿಕಾ ಘಟಕಗಳಲ್ಲಿ ಈಗಾಗಲೇ ರಾಶಿಗಟ್ಟಲೆ ಮಾಲು ದಸ್ತಾನು ಆಗಿರುವುದರಿಂದ ಹೆಚ್ಚುವರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲೂ ಈ ಬಾರಿ ರೈತರು ಹೆಚ್ಚಾಗಿ ಟಮೊಟೋ ಬೆಳೆದಿರುವುದು ಕೋಲಾರ ಸರಕಿಗೆ ಬೇಡಿಕೆ ಕಡಿಮೆ ಆಗುವುದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಸಫಲ್ ಕಾರ್ಖಾನೆಗೆ ಸರಬರಾಜು ಮಾಡಿರುವ ಟೊಮೇಟೋ ಇನ್ನು ಖಾಲಿ ಆಗಿಲ್ಲ, ಆಂಧ್ರ ಮತ್ತು ತಮಿಳುನಾಡಿನ ಜ್ಯೂಸ್ ಘಟಕಗಳು ಮಾಲು ಖರೀದಿ ಮಾಡುವುದನ್ನು ಎರಡು ದಿನಗಳು ನಿಲುಗಡೆ ಮಾಡಿದಲ್ಲಿ ಬೆಲೆ ನೆಲಕಚ್ಚುವುದಲ್ಲದೆ, ರೈತರು ತಾವು ಬೆಳೆದ ಟಮೊಟೋ ವಿಲೇವಾರಿ ಮಾಡಲು ಅವಕಾಶವಿಲ್ಲದೆ ಬೀದಿಗೆ ಇಲ್ಲವೇ ತಿಪ್ಪೆಗೆ ಎಸೆಯುವ ಸಂದರ್ಭ ಒದಗಿ ಬರಬಹುದು.
ಪ್ರಸ್ತುತ ಕೋಲಾರ ಎಪಿಎಂಸಿಯಲ್ಲಿ ರೈತನಿಂದ ಖರೀದಿ ಮಾಡುತ್ತಿರುವ ಪ್ರತಿ 15 ಕೆಜಿ ಬಾಕ್ಸ್ ಟೊಮೇಟೋಗೆ 40 ರಿಂದ 80 ರು.ನೀಡಲಾಗುತ್ತಿದೆ. ದೆಹಲಿಗೆ ಸೋಮವಾರ ಸಾಗಾಣೆ ಮಾಡಿರುವ ನಾಟಿ ಟೊಮೇಟೋಗೆ ಪ್ರತಿ 15 ಕೆಜಿಗೆ 60ರಿಂದ 80 ರು. ಸೀಡ್ಸ್ಗೆ 100 ರಿಂದ 120 ರು.ನಂತೆ ಬಿಕರಿ ಮಾಡಲಾಗಿದೆ.
ಕೇರಳಾ, ಕೋಲ್ಕತ್ತಾ, ಒರಿಸ್ಸಾ ರಾಜ್ಯಗಳಲ್ಲೂ ಬೇಡಿಕೆ ಕಡಿಮೆ ಆಗಿದೆ. ಆಂಧ್ರ ಪ್ರದೇಶದಲ್ಲಿ ಬೆಳೆಯುವ ಮಾಲನ್ನು ಅಲ್ಲಿಂದ ಹೊರ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತಿರುವುದು ಸಹ ಕೋಲಾರದ ಮಾಲಿಗೆ ಕಿಮ್ಮತ್ತು ಕಡಿಮೆ ಆಗಲು ಕಾರಣವಾಗಿದೆ. ಕೋಲಾರದ ಟೊಮೇಟೋ ಸ್ಥಳೀಯ ಮಾರುಕಟ್ಟೆಗಿಂತ ಜ್ಯೂಸ್ ತಯಾರಿಕಾ ಘಟಕಗಳಿಗೆ ಹೆಚ್ಚಾಗಿ ಸರಬರಾಜು ಆಗುತ್ತಿದ್ದು, ಬೆಳೆಯ ಕಾಲ ಮುಗಿದಿದ್ದರೂ ಮಾಲು ಹೆಚ್ಚಾಗಿ ಅವಕ ಕಾಣುತ್ತಿರುವುದರಿಂದ ಜ್ಯೂಸ್ ಘಟಕಗಳಿಗೆ ರವಾನೆ ಮಾಡಲಾಗುತ್ತಿಲ್ಲ. ಜೊತೆಗೆ ಜ್ಯೂಸ್ ಘಟಕಗಳಲ್ಲಿ ಟೊಮೇಟೋ ದಾಸ್ತಾನು ಮಾಡಲು ಜಾಗವಿಲ್ಲದೆ ಇರುವುದರಿಂದ ಉದ್ಯಮಿಗಳು ಖರೀದಿಗೆ ಹಿಂದು ಮುಂದು ನೋಡುವಂತಾಗಿದೆ.


ಸರ್ಕಾರ ಎಚ್ಚೆತ್ತುಕೊಳ್ಳಲಿ
ಟೊಮೇಟೋ ಬೆಳೆಯುವ ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಬೀದಿಗೆ ಎಸೆಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿರುವುದರಿಂದ ರಾಜ್ಯ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಕೋಲಾರದಲ್ಲಿ ಟೊಮೇಟೋ ಸಂಸ್ಕರಣ ಘಟಕ ಪ್ರಾರಂಭಿಸುವುದಾಗಿ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಬೇಕು. ಶಾಲಾ ಮಕ್ಕಳಿಗೆ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿರುವ ರೀತಿಯಲ್ಲೇ ವಾರಕ್ಕೆ ಎರಡು ದಿನ ಟೊಮೇಟೋ ಜ್ಯೂಸ್ ಅಥವಾ ಮಕ್ಕಳಿಗೆ ಇಷ್ಟವಾಗುವ ಸಿಹಿಯನ್ನು ತಯಾರಿಸಿಕೊಡುವ ಮೂಲಕ ಮಕ್ಕಳಲ್ಲಿನ ಪೌಷ್ಠಿಕ ಕೊರತೆ ನಿವಾರಣೆಯ ಜತೆಗೆ ರೈತರಿಗೂ ಅನುಕೂಲ ಮಾಡಿಕೊಡಲು ಸರ್ಕಾರ ಯೋಜನೆ ಜಾರಿಗೆ ತರಬೇಕು.
ಟಿ ನಣಕನಹಳ್ಳಿ ನಟರಾಜ್, ಸದಸ್ಯರು, ಎಪಿಎಂಸಿ, ಕೋಲಾರ


ವ್ಯಾಪಾರಿ ಹೇಳಿದ್ದು
ಟೊಮೇಟೋ ಬಿಕರಿಗೆ ಇದು ಸಕಾಲವಲ್ಲ. ಆದರೂ ಕೋಲಾರ ಎಪಿಎಂಸಿಗೆ ಪ್ರತಿನಿತ್ಯ 100 ರಿಂದ 120 ಲೋಡ್ ಸರಕು ಬರುತ್ತಿದೆ. ಪ್ರಸ್ತುತ 20 ರಿಂದ 30 ಲೋಡ್ ಬಂದರೆ ಸ್ಥಳೀಯ ಮಾರುಕಟ್ಟೆಗೆ ಸಾಕಾಗುತ್ತದೆ. ಅವಕ ಹೆಚ್ಚುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಇನ್ನು ಎರಡು ತಿಂಗಳು ಇದೇ ರೀತಿ ಮಾಲು ಬರುತ್ತಿದ್ದರೆ ಖರೀದಿ ಮಾಡಲು ಸಾಧ್ಯವಾಗದೆ ಮಾಲು ಬೀದಿಗ ಎಳೆಯುವ ಪರಿಸ್ಥಿತಿ ಎದುರಾಗಬಹುದು.
ಟಿ ಆರ್.ಎ.ಪಿ.ನಾರಾಯಣಸ್ವಾಮಿ, ತರಕಾರಿ ವ್ಯಾಪಾರಿ ಮತ್ತು ದಲ್ಲಾಳಿ, ಎಪಿಎಂಸಿ, ಕೋಲಾರ

    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement