ನಶಿಸುತ್ತಿರುವ ಜನಪದ ಕಲೆ: ಬಿ. ರುದ್ರಪ್ಪ
ಬಂಗಾರಪೇಟೆ: ಇಂದಿನ ನಾಗರಿಕತೆಯಿಂದ ಗ್ರಾಮೀಣ ಜಾನಪದ ಕಲೆ ನಶಿಸಿ ಹೋಗುತ್ತಿದ್ದು ಇದನ್ನು ಉಳಿಸಿ ಬೆಳೆಸಲು ಯುವಕರು ಇಚ್ಚಾಶಕ್ತಿ ಪ್ರದರ್ಶಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರುದ್ರಪ್ಪ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಪಂ ಮತ್ತು ಭೂಮಿ ಪೂಜೆ ಜಾನಪದ ಕಲಾ ತಂಡ ಹಿರೈಕರಪನಹಳ್ಳಿ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಯುವಜನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಹಳ್ಳಿಗಾಡಿನಲ್ಲಿ ಮಾತ್ರ ಇಂದಿಗೂ ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ಉಳಿದಿದೆ. ಪಟ್ಟಣ ಪ್ರದೇಶಗಳಲ್ಲಿ ಮಾಯವಾಗಿದೆ. ಯುವಜನ ಮೇಳ ಇರುವುದು ಗ್ರಾಮೀಣ ಪ್ರತಿಭೆಗಳನ್ನು ಗುರಿತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು. ಆದರೆ ಇಲ್ಲಿ ಮೇಳದಲ್ಲಿ ಹೆಚ್ಚಾಗಿ ಕಲಾ ತಂಡಗಳು ಪಾಲ್ಗೊಳ್ಳದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ರುದ್ರಪ್ಪ ಮುಂದಿನ ವರ್ಷ ಹೆಚ್ಚಿನ ಕಲಾ ತಂಡಗಳು ಭಾಗವಹಿಸಿ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸಬೇಕೆಂದು ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಮುಖಂಡ ಹೂವರಸನಹಳ್ಳಿ ರಾಜಪ್ಪ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತದಿಂದ ನಮ್ಮತನ ಮಾಯವಾಗುತ್ತಿದೆ, ಯುವ ಪೀಳಿಗೆ ಆಧುನಿಕತೆಗೆ ತಕ್ಕಂತೆ ಹೊಂದಬೇಕು, ಆದರೆ ತಮ್ಮ ಪೂರ್ವಿಕರಿಂದ ಬೆಳೆದು ಬಂದಿರುವ ಸಂಸ್ಕೃತಿಯನ್ನು ಮರೆಯಬಾರದು. ಯುವ ಪ್ರತಿಭೆಗಳಿಗಾಗಿ ಈ ಕಾರ್ಯಕ್ರಮವನ್ನು ರೂಪಿಸಿದ್ದರೂ ಪ್ರಚಾರದ ಕೊರತೆಯಿಂದಾಗಿ ಹೆಚ್ಚಿನ ಕಲಾ ತಂಡಗಳು ಈ ಮೇಳದಲ್ಲಿ ಬಾಗವಹಿಸಿಲ್ಲ. ಹೆಸರಿಗೆ ಕಾರ್ಯಕ್ರಮ ಮಾಡದೆ ಇದರ ಉದ್ದೇಶವನ್ನು ಜನರಿಗೆ ಸಾರಿ ಹೇಳುವ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ನಂತರ ವಿವಿಧ ಕಲಾ ತಂಡಗಳಿಂದ ಜಾನಪದ ಗೀತೆಗಳು, ರಾಗಿ ಬೀಸುವ ಗೀತೆಗಳು, ಕೋಳಾಟ, ಗೀಗೀ ಮತ್ತಿತರೆ ಕಲಾ ಪ್ರದರ್ಶನ ನಡೆಯಿತು. ತಾಲೂಕಿನ ಹಲವು ಪ್ರತಿಭಾವಂತ ಕಲಾವಿದರನ್ನು ಸನ್ಮಾನಿಸಲಾಯಿತು. ಭೂಮಿ ಪೂಜೆ ಜಾನಪದ ಕಲಾ ತಂಡದ ಅಧ್ಯಕ್ಷ ಎಂ. ಮಾರುತಿ ಪ್ರಸಾದ್, ಸಿ.ಜೆ. ನಾಗರಾಜ್, ಎಚ್.ಎಲ್. ಸುರೇಶ್, ಎ. ಹರೀಶ್, ಸುಭ್ರಮಣಿ, ಲಕ್ಷ್ಮಮ್ಮ, ಮಂಜುನಾಥ್ ಇದ್ದರು.