ರೇಲ್ವೆ ನಿಲ್ದಾಣ ಅಭಿವೃದ್ಧಿ ವೇಗವಾಗಲಿ'
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ರೇಲ್ವೆ ನಿಲ್ದಾಣ ಹಂತ ಹಂತವಾಗಿ ಮೇಲ್ದರ್ಜೆಗೇರುತ್ತಿರುವುದರ ನಡುವೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು-ಕೋಲಾರದ ಮಧ್ಯೆ ಹೊಸ ರೇಲು ಸಂಚರಿಸುತ್ತಿರುವುದರಿಂದ ಜನರಿಗೆ ಅನುಕೂಲವಾಗಿದ್ದು ರೈಲ್ವೆ ಪ್ರಯಾಣಿಕರಿಗಾಗಿ ಮತ್ತಷ್ಟು ಸೌಕರ್ಯಗಳನ್ನು ಒದಗಿಸಬೇಕೆಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ರೇಷ್ಮೆ, ಹಾಲು, ದ್ರಾಕ್ಷಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಈ ಭಾಗ ಇನ್ನೂ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾಣಲು ರೇಲ್ವೆ ಸೌಕರ್ಯ ಹೆಚ್ಚಾಗಬೇಕಾಗಿದೆ ಎಂಬ ಒತ್ತಾಯ ಅನೇಕ ದಶಕಗಳಿಂದಲೂ ವ್ಯಕ್ತವಾಗುತ್ತಲೇ ಇದೆ. ಇದಕ್ಕಾಗಿ ಚಿಕ್ಕಬಳ್ಳಾಪುರ ರೇಲ್ವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಹೋರಾಟಗಳನ್ನು ವಿವಿಧ ರೀತಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಟಿಕೆಟ್ಗಾಗಿ ಪರದಾಟ: ಚಿಕ್ಕಬಳ್ಳಾಪುರ ರೇಲ್ವೆ ನಿಲ್ದಾಣದಲ್ಲಿ ಟಿಕೆಟ್ಗಾಗಿ ಪ್ರಯಾಣಿಕರು ಪರದಾಡುತ್ತಿರುವುದು ಸಮಸ್ಯೆಯಾಗಿದೆ. ಇಲ್ಲಿ ಟಿಕೆಟ್ ವಿತರಿಸಲು ಒಂದೇ ಕೌಂಟರ್ ಇರುವುದು. ಆದರೆ, ಪ್ರಯಾಣಿಕರು ಹೆಚ್ಚಿಗೆ ಬರುವ ಹಿನ್ನೆಲೆಯಲ್ಲಿ ಟಿಕೆಟ್ ವಿತರಣೆ ಮತ್ತು ಪಡೆಯುವ ವಿಚಾರದಲ್ಲಿ ಸಿಬ್ಬಂದಿಗೂ ಮತ್ತು ಜನರಿಗೂ ತುಂಬಾ ತೊಂದರೆಯಾಗಿದೆ. ಬೆಳಿಗ್ಗೆ ಮತ್ತು ಸಂಜೆ ರೈಲು ಹೊರಡುವ ಸಂದರ್ಭದಲ್ಲಿ ಟಿಕೆಟಟ್ಪಡೆಯಲು ಜನ ಮುಗಿ ಬೀಳುತ್ತಿರುತ್ತಾರೆ. ಸಾಲಿನಲ್ಲಿ ನಿಂತು ಟಿಕೆಟ್ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸ್ವಯಂಪ್ರೇರಣೆಯಿಂದ ಜನರೇ ಟಿಕೆಟ್ ಕೇಳಿದರೂ ಸಿಬ್ಬಂದಿಗೆ ಕೊಡಲು ಸಮಯವೇ ಇರುವುದಿಲ್ಲ. ಕೊನೆಗೆ ದೊಡ್ಡ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಕಾಯುತ್ತ ಹಲವರು ರೈಲು ಹೊರಟು ಹೋಗುತ್ತಿದೆ ಎಂಬ ಭಯದಲ್ಲಿ ಟಿಕೆಟ್ ಪಡೆದುಕೊಳ್ಳದೇ ಹಾಗೆಯೇ ಪ್ರಯಾಣಿಸುತ್ತಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ ರೇಲ್ವೆ ನಿಲ್ದಾಣವನ್ನು ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲಿ ಸುಲಭವಾಗಿ ಟಿಕೆಟ್ ಪಡೆಯುವಂತಹ ವಾತಾವರಣವಿಲ್ಲ.
ಒತ್ತಡ ಹೇರಲು ಒತ್ತಾಯ: ನಮ್ಮ ರಾಜ್ಯದವರೇ ಆಗಿರುವ ಮಲ್ಲಿಕಾರ್ಜುನ ಖರ್ಗೆಯವರು ರೇಲ್ವೆ ಸಚಿವರಾಗಿರುವುದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮತ್ತೊಬ್ಬ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಖರ್ಗೆಯವರ ಮೇಲೆ ಒತ್ತಡ ಹೇರಿ ಈ ಭಾಗದಲ್ಲಿ ರೇಲ್ವೆ ಅಭಿವೃದ್ಧಿ ಕಾಮಗಾರಿಗಳು ತ್ವರಿತವಾಗಿ ನಡೆಯುವುದರ ಜೊತೆಗೆ ಹೆಚ್ಚಿನ ಸೌಕರ್ಯಗಳು ಜನರಿಗೆ ದೊರೆತು ಅನುಕೂಲವಾಗುವಂತೆ ಮಾಡಬೇಕೆಂಬ ಮನವಿ ಸಾರ್ವಜನಿಕರದ್ದಾಗಿದೆ. ಸಚಿವರು ಗಂಭೀರವಾಗಿ ತೆಗೆದುಕೊಂಡ ಫಲವಾಗಿ ಚಿಕ್ಕಬಳ್ಳಾಪುರ-ಕೋಲಾರ ನಡುವೆ ರೈಲ್ವೆ ಸಂಚಾರ ಪ್ರಾರಂಭವಾಗಿದೆ. ಈ ನಡುವೆ ಜನರ ಸಂತಸವನ್ನು ಇಮ್ಮಡಿಗೊಳಿಸಲು ಇನ್ನೂ ಹಾಗೆಯೇ ಉಳಿದಿರುವ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕಾಗಿದೆ.