ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಗೊಂಬೆಗಳ ಭಸ್ಮ
ಚಿಕ್ಕಬಳ್ಳಾಪುರ: ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚರ್ಚಿನ ಆವರಣದಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಿದ್ದ ಕ್ರಿಸ್ತನ ಬೊಂಬೆ ಪ್ರದರ್ಶನದ ಗುಡಿಸಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಪೂರ್ಣವಾಗಿ ಭಸ್ಮವಾಗಿದ್ದು, ಸಕಾಲಕ್ಕೆ ಬಂದ ಅಗ್ನಿಶಾಮಕ ದಳದ ಶ್ರಮದಿಂದ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ.
ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಸಿಎಸ್ಐ ಚರ್ಚಿನಲ್ಲಿ ಡಿ.25 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ರಿಸ್ತನ ಜನ್ಮ ದೃಶ್ಯಾವಳಿ ಬಿಂಬಿಸುವ ಬೊಂಬೆ ಪ್ರದರ್ಶನಕ್ಕಾಗಿ ಗುಡಿಸಲನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಲ್ಪಟ್ಟ ಬಾಲ ಏಸು, ಮೇರಿ, ಜೋಸೆಫ್, ಕುರಿಗಳ ಬೊಂಬೆಗಳನ್ನಿಡಲಾಗಿತ್ತು. ಇದಕ್ಕೆ ಮೆರಗು ನೀಡುವ ನಿಟ್ಟಿನಲ್ಲಿ ಆಕರ್ಷಕ ವಿದ್ಯುದೀಪಾಲಂಕಾರವನ್ನೂ ಮಾಡಲಾಗಿತ್ತು. ಕ್ರಿಸ್ಮಸ್ ಹಬ್ಬದ ದಿನ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಸೇರಿದಂತೆ ವಿವಿಧೆಡೆಯಿಂದ ಸಾರ್ವಜನಿಕರು ಪ್ರದರ್ಶನ ಬೊಂಬೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದರೆ, ಸೋಮವಾರ ಬೆಳಿಗ್ಗೆ 8.30 ರ ಸಮಯದಲ್ಲಿ ಗುಡಿಸಲಿನಲ್ಲಿ ಮೊದಲು ಹೊಗೆ ಬಂದು ನಂತರ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಗುಡಿಸಲು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದನ್ನು ಕಂಡ ಕೆಲವರು ಮುಟ್ಟಿಸಿದ ಮಾಹಿತಿಯಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿಯನ್ನು ಆರಿಸಿತು. ಕಳೆದ ಕೆಲ ದಿನಗಳಿಂದ ಚರ್ಚಿನ ಪಕ್ಕದಲ್ಲಿಯೇ ಬೃಹತ್ ಮೇಳವನ್ನು ನಡೆಸಲು ಫೆಂಡಾಲ್ ಹಾಕಿದ್ದು ಇದಕ್ಕೂ ಬೆಂಕಿ ತಗುಲುವ ಆತಂಕ ಪ್ರಾರಂಭದಲ್ಲಿ ಮೂಡಿತ್ತಾದರೂ ಅಗ್ನಿಶಾಮಕ ದಳ ಅದಕ್ಕೆ ಅವಕಾಶ ಕೊಟ್ಟಿಲ್ಲ. ಪ್ರಸ್ತುತ ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ದುರ್ಘಟನೆ ಸಂಭವಿಸಿದ್ದು ಇಟಲಿಯಿಂದ ತರಿಸಲಾಗಿದ್ದ ವಸ್ತುಗಳು ಸುಟ್ಟು ಹೋಗಿ ಸುಮಾರು 5 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.