2013ರ ಚಿಕ್ಕಬಳ್ಳಾಪುರ ಜಿಲ್ಲೆಯ ಹಿನ್ನೋಟ
ಎನ್. ವೆಂಕಟೇಶ್
ಜ.13 ರಂದು ಚಿಕ್ಕಬಳ್ಳಾಪುರದಲ್ಲಿ ಶ್ರೀಗಳ ಜನ್ಮ ದಿನಾಚರಣೆಗೆ ಅದ್ಧೂರಿ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವುದರ ನಡುವೆ ಅದಿಚುಂಚನಗಿರಿ ಪೀಠಾಧಿಪತಿಗಳಾಗಿದ್ದ ಬಾಲಗಂಗಧಾರನಾಥ ಸ್ವಾಮೀಜಿಯವರು ನಿಧನರಾಗಿ ಅಪಾರ ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿಸಿದರು. ವಿವಿಧೆಡೆ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಕೈಗೊಂಡು ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದ ಶ್ರೀಗಳ ಗುಣಗಾನ ಮಾಡಲಾಯಿತು.
ಜ.15 ರಂದು ಚಿಕ್ಕಬಳ್ಳಾಪುರ ನಗರದ ನಂದಿ ಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿನಿ ವಿಧಾನಸೌಧ, ಜಿಲ್ಲಾ ಸರ್ಕಾರಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಸುಮಾರು 90 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಶಂಕುಸ್ಥಾಪನೆ ನೆರವೇರಿಸಿದರು.
ಜ.27 ಮಹಿಳೆಯರಿಗೆ ಮಹಿಳೆಯರೇ ಶತ್ರುಗಳು ಎನ್ನುವಂತೆ ಅಮಾಯಕ ಮಹಿಳೆಯರನ್ನು ನಂಬಿಸಿ ದೆಹಲಿ ವೇಶ್ಯಾವಾಟಿಕೆ ಕೇಂದ್ರಕ್ಕೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಡೆಲ್ಲಿ ಬುವಮ್ಮ, ರೇಷ್ಮಾ, ಶಕೀರಾ ಎಂಬ ಮೂವರು ಮಹಿಳೆಯರನ್ನು ಜಿಲ್ಲಾ ಪೊಲೀಸರು ಬಂಧಿಸಿದರು.
ಫೆ.2 ರಂದು ಚಿಕ್ಕಬಳ್ಳಾಪುರ ನಗರದಲ್ಲಿ ಕನ್ನಡ ಡಿಂಡಮ ಬಾರಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೈಗೊಳ್ಳಲಾಯಿತು. ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಚಿಂತನೆಯನ್ನು ಪ್ರತಿಪಾದಿಸಿದರು.
ಫೆ.2 ರಂದು ಚಿಕ್ಕಬಳ್ಳಾಪುರ ನಗರದಲ್ಲಿ ಕನ್ನಡ ಡಿಂಡಮ ಬಾರಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೈಗೊಳ್ಳಲಾಯಿತು. ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಚಿಂತನೆಯನ್ನು ಪ್ರತಿಪಾದಿಸಿದರು.
ಮಾ.11 ರಂದು ಜಿಲ್ಲೆಯಲ್ಲಿ ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಸದಸ್ಯರ ಆಯ್ಕೆಯ ಫಲಿತಾಂಶ ಪ್ರಕಟವಾಯಿತು. ವಿಜೇತ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.
ಮಾ.13 ರಂದು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಆಶಯದಂತೆ ದೇಶದ ಮೊದಲ ಪ್ರಧಾನಿ ಜವಾಹಾರ್ ಲಾಲ್ ನೆಹರೂ ಅವರಿಂದ ಉದ್ಘಾಟನೆ ಕಂಡಿದ್ದ ಜಿಲ್ಲಾ ಗ್ರಂಥಾಲಯ ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಏ.12 ರಂದು ಸಚಿವರು ಸೇರಿದಂತೆ ಗಣ್ಯಾತಿಗಣ್ಯರನ್ನು ತಮ್ಮ ಆಶ್ರಮಕ್ಕೆ ಕರೆಸಿಕೊಳ್ಳುತ್ತಿದ್ದ ಬಂಗಾರು ಖ್ಯಾತಿಯ ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಶಿವಸಾಯಿ ಬಾಬಾ ಪೊಲೀಸ್ ಠಾಣೆ ಸೇರಿದ. ಖಾಸಗೀ ಸುದ್ದಿ ವಾಹಿನಿಯೊಂದು ನಡೆಸಿದಕುಟುಕು ಕಾರ್ಯಾಚರಣೆಯಲ್ಲಿ ಮಹಿಳೆಯೊಂದಿಗೆ ಸರಸ ಸಲ್ಲಾಪವಾಡುತ್ತ ಸಿಕ್ಕಿ ಬಿದ್ದಿದ್ದ.
ಮೇ 26 ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಡಾ.ಆರ್. ವಿಶಾಲ್ ನಿಗರ್ಮಿತ ಜಿಲ್ಲಾಧಿಕಾರಿ ಮಂಜುಳಾರವರಿಂದ ಅಧಿಕಾರ ಸ್ವೀಕರಿಸಿದರು.
ಜೂ.14 ರಂದು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದರು. ವಿದ್ಯಾರ್ಥಿ ನಿಲಯ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ಸಮಸ್ಯೆಗಳನ್ನು ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಆ.4 ರಂದು ಚಿಕ್ಕಬಳ್ಳಾಪುರ ನಗರದ ಹೊರ ವಲಯದಲ್ಲಿರುವ ಎಸ್ ಜೆಸಿಐಟಿ ಕಾಲೇಜಿನಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೃಹತ್ ಉದ್ಯೋಗ ಮೇಳ ನಡೆಯಿತು. ರಾಜ್ಯದ ವಿವಿಧೆಡೆಯಿಂದ ನಿರುದ್ಯೋಗಿಗಳು ಮೇಳದಲ್ಲಿ ಉದ್ಯೋಗವನ್ನು ಪಡೆದುಕೊಂಡರು.
ಸೆ.20 ರಂದು ಜಿಲ್ಲೆಯ ಪಾಲಿಗೆ ವಿಶೇಷ ದಿನ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೊಡ್ಡ ಅರಮನೆಯ ಮಾದರಿಯಲ್ಲಿ ಸುಮಾರು 25 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಭವನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆ ಮಾಡಿದರು.
ಅ.15 ರಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಮೀಪ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರರಿಬ್ಬರು ಸಾವನ್ನಪ್ಪಿದ್ದು ತಪ್ಪು ಗ್ರಹಿಕೆಯಿಂದ ನಾನಾ ತಿರುವುಗಳನ್ನು ಪಡೆದುಕೊಂಡ ಈ ಪ್ರಕರಣವು ಗ್ರಾಮಸ್ಥರ ಪ್ರತಿಭಟನೆ, ವೈದ್ಯರಿಗೆ ಮುತ್ತಿಗೆ, ಪೊಲೀಸರ ಮೇಲೆ ಹಲ್ಲೆ, ಕಲ್ಲು ತೂರಾಟದಂತಹ ಘಟನೆಗಳಿಗೆ ಕಾರಣವಾಯಿತು.
ನ.8 ರಂದು ಅವಿಭಜಿತ ಕೋಲಾರ ಜಿಲ್ಲೆಯ ಜನರ ಕನಸು ನನಾಯಿತು. ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ನೂತನ ರೈಲು ಸಂಚರಿಸುವುದಕ್ಕೆ ಚಾಲನೆ ನೀಡಲಾಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಿಕ್ಕಬಳ್ಳಾಪುರ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗುವುದಾಗಿ ಹೇಳುವುದರ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಿಸಿದರು.
ನ.11 ರಂದು ದೆಹಲಿಯಲ್ಲಿ ವೇಶ್ಯಾವಾಟಿಕೆ ಕೂಪಕ್ಕೆ ಸಿಲುಕಿಕೊಂಡಿದ್ದ ಮಹಿಳೆಯರನ್ನು ಪೊಲೀಸರು ರಕ್ಷಿಸಿ ಚಿಕ್ಕಬಳ್ಳಾಪುರಕ್ಕೆ ಕರೆ ತಂದರು. ವ್ಯವಸ್ಥಿತಿ ಚುರುಕಿನ ಕಾರ್ಯಾಚರಣೆ ಯಶಸ್ವಿಯಿಂದ ಜನರ ಮೆಚ್ಚುಗೆಗೆ ಪಾತ್ರರಾದರು.
ಡಿ.2 ರಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಬಳಿ ರೈತರು ತಮ್ಮ ರಾಸುಗಳು ಸಮೇತ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಹೋ ರಾತ್ರಿ ಧರಣಿ ಕೈಗೊಂಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕೆ ವಶಪಡಿಸಿಕೊಂಡಿರುವ ಕೃಷಿ ಭೂಮಿಗೆ ಸೂಕ್ತ ಪರಿಹಾರವನ್ನು ವಿತರಿಸಬೇಕೆಂದು ಆಗ್ರಹಿಸಿದರು.
ಡಿ.8 ರಂದು ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹೇಳಿಕೆಗಳನ್ನು ನೀಡಿದರೂ ಸಹ ಮಡೆಸ್ನಾನ ಆಚರಣೆಯು ಚಿಕ್ಕಬಳ್ಳಾಪುರ ನಗರದ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯಿತು. ಸಿಪಿಎಂ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಮಹಿಳೆಯರ ಮೇಲೆ ಕೆಲವರು ಹಲ್ಲೆ ನಡೆಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು.
ಡಿ.13 ರಂದು ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ರೈತನೊಬ್ಬ ಕಚೇರಿ ಮುಂಭಾಗದ ಮರವನ್ನೇರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಎಲ್ಲರನ್ನು ಕೆಲ ಸಮಯ ಕಂಲಾಗಲಾಗುವಂತೆ ಮಾಡಿದ. ಆ ನಂತರ ಅಧಿಕಾರಿಗಳು ಮತ್ತು ಜನರು ಸಮಾಧಾನಪಡಿಸಿ ಕೆಳಗಿಳಿಸಿದರು.