ಕೃತಿಗಳು ಕುವೆಂಪು ಅವರನ್ನು ಜೀವಂತವಾಗಿಟ್ಟಿವೆ
ಚಿಂತಾಮಣಿ: ಕುವೆಂಪು ಅವರ ಕೃತಿಗಳು ಅವರನ್ನು ಜೀವಂತವಾಗಿಟ್ಟಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಅಭಿಪ್ರಾಯಪಟ್ಟರು.
ನಗರದ ಸೊಣ್ಣಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿಸಿದ್ದ ಕುವೆಂಪು ಕಾವ್ಯ ವಾಚನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ತಳಗವಾರ ಆನಂದ್ ಮಾತನಾಡಿ, ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ. ಶ್ರೇಷ್ಠ ಗ್ರಂಥಗಳನ್ನು ಓದುವುದರಿಂದ ಉತ್ತಮ ಚಿಂತನೆಗಳು ಹೊರಹೊಮ್ಮುತ್ತವೆ ಎಂದರು. ಶಾಲಾ ವಿದ್ಯಾರ್ಥಿಗಳು ಕುವೆಂಪು ಅವರ ಕವನಗಳ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗೆದ್ದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರವರಿಗೆ ಮೌನಾಚರಣೆ ಮೂಲಕ ಸಂತಾಪ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಮಾಡಿದ ಕುವೆಂಪುರವರ ಮೂರ್ತಿಯನ್ನು ಅನಾವರಣಗೊಳಿಸಲಾಯಿತು. ಉಪನ್ಯಾಸ ನೀಡಿದ ಪ್ರವಚನಕಾರ ಆನಂದ್ರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಿ.ಬಿ. ಹನುಮಂತಪ್ಪ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಎಸ್.ವಿ. ನಾಗರಾಜರಾವ್ ವಿದ್ಯಾರ್ಥಿಗಳನ್ನು ನಗೆಗಡಲಿನಲ್ಲಿ ತೇಲಿಸಿದರು. ಮುಖ್ಯ ಶಿಕ್ಷಕ ಬಿ. ಲಕ್ಷ್ಮಣರೆಡ್ಡಿ, ಬಿ. ಜನಾರ್ದನರೆಡ್ಡಿ, ಶಿಕ್ಷಕರಾದ ಎಸ್. ಮಂಜುನಾಥ್, ಕರೀಂಖಾನ್ ಇದ್ದರು.