ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಬೇಡ್ಕರ್ ಭಾವನಮನಕ್ಕಿಂತ ಮಾರ್ಗದರ್ಶನದಲ್ಲಿ ನಡೆಯಿರಿ

Parashurama
Updated On : 1 Feb 2013, 10:58 am

ಚಿಕ್ಕಬಳ್ಳಾಪುರ: ಕೇವಲ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಪೂಜೆ ಮಾಡಿ ಬಿಟ್ಟರೆ ಅವರ ಕನಸು ನನಸಾಗುವುದಿಲ್ಲ. ಅವರು ತಿಳಿಸಿದ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆದುಕೊಂಡಾಗ ಮಾತ್ರ ಅವರನ್ನು ನಿಜವಾಗಲೂ ಗೌರವಿಸಿದಂತಾಗುತ್ತದೆ. ಹಾಗೆಯೇ ಸಮಾಜದಲ್ಲಿ ಬಡ ಜನರ ಶೋಷಣೆಯೂ ತಪ್ಪುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಎನ್. ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆಯ ವತಿಯಿಂದ ಏರ್ಪಡಿಸಿದ್ದ ಭಾರತ ಸಂವಿಧಾನ ಜಾರಿ ದಿನವನ್ನು ದಲಿತರ ಸಂರಕ್ಷಣೆ ದಿನವನ್ನಾಗಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಸರಿಗಾಗಿ ಸಂಘಟನೆಗಳನ್ನು ಮಾಡಿಕೊಳ್ಳಲಾಗಿದೆ. ಗುಂಪುಗಳಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡು ಹೋರಾಟ ನಡೆಸುವಂತಹುದನ್ನು ಕಾಣಲಾಗುತ್ತಿದೆ. ಇದರಿಂದ ಕೆಲವರು ನಾಯಕರಾಗುತ್ತಿದ್ದರೂ ದೀನ- ದಲಿತರು, ಬಡಜನರು ಇನ್ನೂ ಹಿಂದುಳಿದ ಸ್ಥಿತಿಯಲ್ಲಿಯೇ ಇದ್ದಾರೆ. ಅಂಬೇಡ್ಕರ್ ಅವರು ಸಂಘಟನೆಯ ಬಗ್ಗೆ ಪ್ರತಿಪಾದಿಸಿದ್ದರೆ ಹೊರತು ಒಡೆದು ಆಳುವ ನೀತಿಯನ್ನಲ್ಲ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಶಿಕ್ಷಣ ಪಡೆದು ನಂತರ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿ ಮಹಾನ್ ವ್ಯಕ್ತಿ ಎನಿಸಿಕೊಂಡರು. ಅವರನ್ನು ಮಾದರಿಯಾಗಿ ತೆಗೆದುಕೊಂಡು ಅನೇಕ ಮಂದಿ ಅಂಬೇಡ್ಕರ್ ಅವರ ರೀತಿ ಬೆಳೆಯಬೇಕಾಗಿತ್ತು. ಆದರೆ, ಶಿಕ್ಷಣವು ಸಮರ್ಪಕವಾಗಿ ಸಿಗುತ್ತಿಲ್ಲದ ಕಾರಣ ಹಿಂದುಳಿಯುವಂತಾಗಿದೆ. ಮೊದಲು ಗ್ರಾಮ ಗ್ರಾಮಗಳಲ್ಲಿ ಶಿಕ್ಷಣ ಪಡೆಯದ ಮಕ್ಕಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು.ಇದಕ್ಕೆ ಪ್ರಾಮಾಣಿಕವಾಗಿ ಪ್ರತಿಯೊಬ್ಬರು ಒತ್ತು ಕೊಟ್ಟಾಗ ಶೋಷಣೆ, ದೌರ್ಜನ್ಯದಂತಹ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ. ಆದರೆ, ಈ ಕೆಲಸವಾಗುತ್ತಿದೆಯೇ ಇದಕ್ಕೆ ಒತ್ತು ಕೊಡಲಾಗಿದೆಯೇ ಎಂದು ಪ್ರಶ್ನಿಸಿದರು.
ಡಿಸಿ ಮಂಜುಳಾ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರ ಏಳಿಗೆಗಾಗಿ ಸರ್ಕಾರವು ಜಾರಿಗೊಳಿಸುತ್ತಿರುವ ಅನುದಾನ ಸದ್ಬಳಕೆಯಾಗುವ ಕುರಿತು ಫೆಬ್ರವರಿ ತಿಂಗಳಿನಲ್ಲಿ ಜಾಗೃತಿ ಸಭೆ ನಡೆಸಿ, ಸೂಕ್ತ ಫಲಾನುಭವಿಗಳಿಗೆ ನ್ಯಾಯಯುತವಾಗಿ ದೊರೆಯುವಂತೆ ಮಾಡುವುದಾಗಿ ಭರವಸೆ ನೀಡಿದರು.
ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್. ಗಂಗಾಧರಪ್ಪ ಮಾತನಾಡಿ, ಜನಾಂಗದವರು ಕೇವಲ ರಾಜಕೀಯವಾಗಿ ಮುಂದುವರಿಯುತ್ತಿದ್ದಾರೆ. ಆದರೆ, ಇಂದಿಗೂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಜಿಲ್ಲೆಯಲ್ಲಿ ಕೆಲ ಕೆಳಮಟ್ಟದ ಅಧಿಕಾರಿಗಳ ತಪ್ಪು ಮಾಹಿತಿಯಿಂದಾಗಿ ಜನಾಂಗದ ಸೂಕ್ತ ಫಲಾನುಭವಿಗಳಿಗೆ ಸವಲತ್ತುಗಳು ದೊರೆಯುತ್ತಿಲ್ಲ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಎಂ. ಜಯರಾಮ್, ಕದಸಂಸ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ, ಸಮಿತಿಯ ಸದಸ್ಯ ಎಸ್. ಆಂಜಿನಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಕೆ.ವಿ. ವೆಂಕಟೇಶ್, ಸಂಚಾಲಕರಾದ ಎನ್. ಶ್ರೀನಿವಾಸ್, ಡಿ.ಎಂ. ನರಸಿಂಹಯ್ಯ, ಲಕ್ಷ್ಮೀ ನರಸಿಂಹಯ್ಯ, ತಿರುಮಲಪ್ಪ, ಕೆ.ನಂಜುಂಡಪ್ಪ, ಕಡ್ಡೀಲು ವೆಂಕಟರೋಣಪ್ಪ, ಕಡೇಹಳ್ಳಿ ಕದಿರಪ್ಪ, ಜಿಲ್ಲಾ ಸಮಿತಿಯ ಸದಸ್ಯರಾದ ಸಿ.ಕೆ. ಮಲ್ಲಪ್ಪ, ಜಿ.ನರಸಿಂಹಮೂರ್ತಿ, ಮುನಿವೆಂಕಟಪ್ಪ, ತಾಲೂಕು ಸಂಚಾಲಕರಾದ ಎಸ್. ವೆಂಕಟೇಶ್, ಕಿರಣ್‌ಕುಮಾರ್, ಅರುಣ್‌ಕುಮಾರ್, ಜಿ.ಗಂಗಣ್ಣ, ಚಲಪತಿ, ಮುನಿರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments