ಇಂದಿನಿಂದ ಫಲ-ಪುಷ್ಪ ಪ್ರದರ್ಶನ
ಕೋಲಾರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಖೆಯ ಆತ್ಮ ಯೋಜನೆ ಆಶ್ರಯದಲ್ಲಿ 3 ದಿನಗಳ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಜಿಲ್ಲಾ ತೋಟಗಾರಿಕಾ ನರ್ಸರಿಯಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
ಕೋಲಾರ ಸಿಲ್ಕ್, ಮಿಲ್ಕ್ಗೆ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಿಗೂ ಹೆಸರು ವಾಸಿಯಾಗಿದೆ. ಜಿಲ್ಲೆಯಲ್ಲಿ ಬೆಳೆಯುವ ವಿಶ್ವ ವಿಖ್ಯಾತ ಮಾವು, ತರಕಾರಿ, ಹೂವುಗಳು ದೇಶ-ವಿದೇಶಕ್ಕೆ ರಫ್ತು ಆಗುವ ಮೂಲಕ ಜಿಲ್ಲೆಯ ಕೀರ್ತಿ ಬೆಳಗಿಸಿದೆ. ಮಳೆಯ ಕೊರೆತೆಯಿದ್ದರೂ ರೈತರು ಹನಿ ನೀರಾವರಿಯ ಮೂಲಕ ಪೌಷ್ಟಿಕವಾದ ತರಕಾರಿ, ಹಣ್ಣು, ಸುಗಂಧ ಪರಿಮಳ ನೀಡುವ ಹೂವುಗಳನ್ನು ಬೆಳೆಯುವ ಮೂಲಕ ಬದುಕಿಗೆ ದಾರಿ ಕಂಡುಕೊಂಡಿದ್ದಾರೆ.
ಇಂತಹ ರೈತರಿಗೆ ಉತ್ತೇಜನ ನೀಡುವುದು, ಫಲ-ಪುಷ್ಪಗಳ ಬಗ್ಗೆ ಜನತೆಯಲ್ಲಿ ಪ್ರೀತಿ ಮೂಡಿಸುವುದು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ರೈತರು ಮತ್ತು ಆಸಕ್ತರಿಗೆ ವಿವಿಧ ವಿಷಯಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಫೆ.2 ರಿಂದ 4 ರವರೆಗೆ 3 ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯವರು ಕಾರ್ಯಕ್ರಮ ಯಶಸ್ವಿಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲಾ ತೋಟಗಾರಿಕಾ ನರ್ಸರಿಯನ್ನು ಫಲ-ಪುಷ್ಪ ಪ್ರದರ್ಶನಕ್ಕಾಗಿ ಸಜ್ಜುಗೊಳಿಸಲಾಗುತ್ತಿದೆ. ಅಲಂಕಾರಿಕಾ ಹೂಗಳನ್ನು ನರ್ಸರಿಯ ವಿವಿಧ ಕಡೆ ಸುಂದರವಾಗಿ ವಿನ್ಯಾಸಗೊಳಿಸಿ ನವ ವಧುವಿನಂತೆ ಸಿಂಗಾರಗೊಳಿಸಲಾಗುತ್ತಿದೆ. ಇಲಾಖೆ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದವರು ಜನತೆಯನ್ನು ಆಕರ್ಷಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ನರ್ಸರಿಯಲ್ಲಿನ ಪುರಾತನ ಬಾವಿಯನ್ನು ಸ್ವಚ್ಛಗೊಳಿಸಿ ಅದರಲ್ಲೂ ಸಹ ಹೂವಿನ ಗಿಡಗಳನ್ನು ವಿನ್ಯಾಸಗೊಳಿಸಿ ಜನತೆಯನ್ನು ಆಕರ್ಷಿಸಲು ತಯಾರಿ ನಡೆದಿದೆ. ಜಿಲ್ಲೆಯ ರೈತರಿಗೆ ಮತ್ತು ನಾಗರಿಕರಿಗೆ ಉಚಿತ ಪ್ರವೇಶ ಸೌಲಭ್ಯ ಕಲ್ಪಿಸಲಾಗಿದೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರದರ್ಶನದಲ್ಲಿ ಭಾಗವಹಿಸಲು ಶಿಕ್ಷಣ ಇಲಾಖೆ ಮೂಲಕ ಸೂಚಿಸಲಾಗಿದೆ.
ಫೆ.2 ರಂದು ಸಂಜೆ 4 ಗಂಟೆಗೆ ಫಲಪುಷ್ಪ ಪ್ರದರ್ಶನದ ಉದ್ಘಾಟನೆ ನೆರವೇರಲಿದ್ದು, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವರ್ತೂರ್ ಪ್ರಕಾಶ್, ಜಿಲ್ಲೆಯ ಎಲ್ಲಾ ಶಾಸಕರನ್ನು ಮತ್ತು ಇನ್ನಿತರ ಜನಪ್ರತಿನಿಧಿಗಳನ್ನು ಶಿಷ್ಟಾಚಾರದನ್ವಯ ಆಹ್ವಾನಿಸಲಾಗಿದೆ.
ಫೆ.3ರಂದು ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ನಗರದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಚಿತ್ರಬಿಡಿಸುವ ಸ್ಪರ್ಧೆ ಹಾಗೂ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫೆ.4ರಂದು ಬೆಳಿಗ್ಗೆ 11 ಗಂಟೆಗೆ 'ಪ್ರಗತಿಯತ್ತ ತೋಟಗಾರಿಕೆ ವಿಷಯವಾಗಿ ರೈತರು ಮತ್ತು ತಜ್ಞರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಜತೆಗೆ ಜಿಲ್ಲೆಯ ಪ್ರಗತಿಪರ ರೈತರನ್ನು ಸನ್ಮಾನಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಫಲ-ಪುಷ್ಪ ಪ್ರದರ್ಶನದ ಯಶಸ್ವಿಗಾಗಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.