ಕನ್ನಡ ಮರೆತರೆ ಸಂಸ್ಕೃತಿ ನಾಶ
ಚಿಕ್ಕಬಳ್ಳಾಪುರ: ಎರಡು ಸಾವಿರ ವರ್ಷಗಳ ಇತಿಹಾಸ, ಪರಂಪರೆ ಹೊಂದಿರುವ ಕನ್ನಡ ಮರೆತು ಹೋಗಿ ಆಂಗ್ಲ ಭಾಷೆಯತ್ತ ವಾಲಿದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಪಾಶ್ಚಾತ್ತೀಕರಣದ ದಾಸರಾಗುವ ವಾತಾವರಣವೂ ನಿರ್ಮಾಣವಾಗುತ್ತದೆ ಎಂದು ಚಿಕ್ಕಬಳ್ಳಾಪುರ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೋಪಾಲಗೌಡ ಕಲ್ವಮಂಜಲಿ ಆತಂಕ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಮಾಡಿದ ಅವರು, ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ಕನ್ನಡಕ್ಕೆ ಆಗುತ್ತಿರುವ ಧಕ್ಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈಗೀಗ ಕನ್ನಡ ಬಳಸುವ, ಓದುವ ಮತ್ತು ಬರೆಯುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಇಂದಿನ ಪೀಳಿಗೆ ಗುರಿಗಳಿಲ್ಲದೇ ಮಾತೃಭಾಷೆ ಮರೆಯುತ್ತಿದೆ. ಇದಕ್ಕೆ ಪೋಷಕರು ಸಹ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಹೀಗೆ ಕನ್ನಡ ಭಾಷೆ ಬಳಸುವವರು ಗಣನೀಯವಾಗಿ ಕಡಿಮೆಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ತಿಳಿಸಿದರು.
ಸರ್ಕಾರಕ್ಕೆ ಮನವಿ: ಕನ್ನಡ ಭಾಷೆ ಈಗ ಅನ್ನ ನೀಡುವ ಭಾಷೆಯಾಗಿ ಉಳಿದಿಲ್ಲ ಎನ್ನುವುದು ಕಟು ಸತ್ಯ. ಇನ್ನೂ ನಗರಗಳ ಪಂಚತಾರಾ ಹೋಟೆಲ್ಗಳಲ್ಲಿ ಬಾಗಿಲು ಕಾಯುವ ಸೆಕ್ಯುರಿಟಿ ಗಾರ್ಡ್ ಕೆಲಸ ಸಿಗಬೇಕಾದರೂ ಇಂಗ್ಲಿಷ್ ಭಾಷೆಯೇ ಗೊತ್ತಿರಬೇಕು. ಕನ್ನಡ ಗೊತ್ತಿದ್ದರೆ ಎಂದೂ ತಿಳಿಸಿದಾಗ ಆದ್ಯತೆ ಕೊಡುವುದಿಲ್ಲ ಎಂದರು. ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ ಮಾತನಾಡಿ, ಕನ್ನಡ ಭಾಷೆ ಕೇವಲ ಭಾಷೆಯಲ್ಲ. ಒಂದು ಸಂಸ್ಕೃತಿ, ಒಂದು ಧರ್ಮ, ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದರೂ ಕನ್ನಡ 27ನೇ ಸ್ಥಾನ ಪಡೆದಿದೆ ಎಂದರು.
ಶಾಸಕ ಕೆ.ಪಿ.ಬಚ್ಚೇಗೌಡ, ಸಿದ್ದೇಶ್ವರನಾಥ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾಧ್ಯಕ್ಷ ಹನುಮಂತರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮಾದೇಗೌಡ, ಕನ್ನಪರ ಹೋರಾಟಗಾರ ಚಿ.ವೀರಶೇಖರ್, ಕಸಾಪ ಪದಾಧಿಕಾರಿಗಳಾದ ಪ್ರೇಮಲೀಲಾ ವೆಂಕಟೇಶ್, ಎಸ್. ಶಿವರಾಂ, ಅಮೃತ್ಕುಮಾರ್, ಪ್ರೊ. ಕೋಡಿರಂಗಪ್ಪ ಮುಂತಾದವರು ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಪಿ. ನವಮೋಹನ್ ಸ್ವಾಗತಿಸಿ, ಎಂ. ಕೃಷ್ಣಪ್ಪ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.