ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಚಿಂತಾಮಣಿ: ತಾಲೂಕಿನ ದೊಡ್ಡಗಂಜೂರು ಗ್ರಾಮ ಪಂಚಾಯಿತಿಗೆ ಸೇರಿದ ಕೊಡದವಾಡಿ ಗ್ರಾಮದಲ್ಲಿ ಶಾಸಕ ಡಾ. ಎಂ.ಸಿ. ಸುಧಾಕರ್ ಅವರು ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಶಾಸಕರ ಅನುದಾನದಲ್ಲಿ ಎಸ್ಸಿಪಿ ಯೋಜನೆಯಡಿ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಸುಮಾರು 8 ಲಕ್ಷ ವೆಚ್ಚದಲ್ಲಿ ಸೀಮೆಂಟ್ ರಸ್ತೆಗಳ ಕಾಮಗಾರಿಗೆ ಹಾಗೂ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ 1.40 ಲಕ್ಷ ರು.ಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಇಲ್ಲಿನ ಸರ್ಕಾರಿ ಶಾಲೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಶಾಲೆಗೆ ಮತ್ತೊಂದು ಕೊಠಡಿಯನ್ನು ನಿರ್ಮಿಸಿಕೊಡಲಾಗುವುದು. ಗ್ರಾಮದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕೆಂದು ಸಂಬಂಧಿಸಿದವರಿಗೆ ಸೂಚಿಸಿದರು. ಜಿಪಂ ಸದಸ್ಯೆ ಉಮಾದೇವಿ ಸತ್ಯನಾರಾಯಣರೆಡ್ಡಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಮೀನಾ ಶ್ರೀರಾಮರೆಡ್ಡಿ, ಗ್ರಾಪಂ ಸದಸ್ಯರಾದ ಎನ್.ಚೌಡರೆಡ್ಡಿ, ಜಯರಾಮರೆಡ್ಡಿ, ವೆಂಕಟಶಾಮಿ, ಮುನಿರೆಡ್ಡಿ, ಅನಿತಾ ಅಪ್ಪಿರೆಡ್ಡಿ ಹಾಗೂ ಮಾಜಿ ಸದಸ್ಯರಾದ ಚಾಂದ್ ಪಾಷ(ಅಬ್ದುಲ್ ಲ್ರೈಫ್), ಆರ್.ಎಸ್. ನಾರಾಯಣಸ್ವಾಮಿ, ಕೆ.ಬಿ. ವೆಂಕಟರಾಯಪ್ಪ, ಬಿ.ಸಿ. ತಮ್ಮರೆಡ್ಡಿ, ಬಾಕ್ಷುಖಾನ್, ಮುಖಂಡರಾದ ಆರ್.ಚೌಡಪ್ಪ, ಎಸ್.ಆರ್.ಎಸ್. ಶ್ರೀನಿವಾಸ, ಯುಸೂಫ್, ಕೆ.ಎಸ್. ನಾಗರಾಜ್, ಕೆ.ಬಿ. ಕೃಷ್ಣಮೂರ್ತಿ, ಬಾಬಾಜಾನ್, ಶಬ್ಬಿರ್ ಪಾಷ, ಕೆ.ಎಂ. ಶ್ರೀರಾಮರೆಡ್ಡಿ, ಗಂಗಿರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ನಯಾಜ್ ಅಹ್ಮದ್ಗೆ ಡಾಕ್ಟರೇಟ್ ಪದವಿ
ಬಾಗೇಪಲ್ಲಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಎಂ. ನಯಾಜ್ ಅಹ್ಮದ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರಂಗಾರೆಡ್ಡಿ ಕೋಡಿರಾಂಪುರರವರ ಮಾರ್ಗದರ್ಶನದಲ್ಲಿ ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳ ಬದುಕು ಬರಹ- ಒಂದು ಅಧ್ಯಯನ ಎಂಬ ವಿಷಯದ ಬಗ್ಗೆ ಸಲ್ಲಿಸಲಾಗಿದ್ದ ಪ್ರೌಢ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.ಇದರಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಲ್ಲಿ ಕನ್ನಡ ವಿಷಯದಲ್ಲಿ ಡಾಕ್ಟರೇಟ್ ಮಾಡಿದ ಮೊದಲಿಗರು ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಕನ್ನಡ ವಿಷಯದಲ್ಲಿ ಮೊದಲ ಡಾಕ್ಟರೇಟ್ ಪಡೆದ ಖ್ಯಾತಿ ಈಗ ಡಾ.ಕೆ.ಎಂ. ನಯಾಜ್ ಅಹ್ಮದ್ ಅವರಿಗೆ ಸಂದಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.