ಅಭಿವೃದ್ಧಿಯಲ್ಲಿ 12ನೇ ಸ್ಥಾನಕ್ಕೆ ಕುಸಿದ ರಾಜ್ಯ
ಶಿಡ್ಲಘಟ್ಟ: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯವು ಅಭಿವೃದ್ಧಿಯಲ್ಲಿ 2 ಸ್ಥಾನದಲ್ಲಿತ್ತು. ಇದೀಗ ರಾಷ್ಟ್ರದಲ್ಲಿ 12 ನೇ ಸ್ಥಾನಕ್ಕೆ ಬಂದಿದೆ. ಇದಕ್ಕೆ ನನ್ನ ನಂತರ ಬಂದಿರುವ ಮುಖ್ಯಮಂತ್ರಿಗಳೇ ಕಾರಣರಾಗಿದ್ದು, ರಾಜ್ಯದ ಅಭಿವೃದ್ಧಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಡಿಸುವ ಬಜೆಟ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅದು ಕೇವಲ ಬಿಜೆಪಿ ಪ್ರಣಾಳಿಕೆಯಾಗಿಯೇ ಇರುತ್ತದೆ. ಶೆಟ್ಟರ್ ಅವರು ಬಜೆಟ್ ಮಂಡಿಸಿದರೂ ಮುಂದೆ ಬಿಜೆಪಿ ಸರ್ಕಾರ ಬರುವುದಿಲ್ಲ. ಬಜೆಟ್‌ನಲ್ಲಿ ಮಂಡಿಸುವ ಯೋಜನೆಗಳನ್ನು ಮುಂದಿನ ಸರ್ಕಾರ ಜಾರಿಗೆ ತರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಯಾವ ಪುರುಷಾರ್ಥಕ್ಕೆ ಬಜೆಟ್ ಮಂಡನೆ ಮಾಡುವುದು ಎಂದು ಪ್ರಶ್ನಿಸಿದರು.
ನಾನು ಯಾವುದೇ ಒಂದು ಜಾತಿಗೆ ಸೀಮಿತಗೊಂಡವನಲ್ಲ. ಎಲ್ಲ ಜಾತಿ ಧರ್ಮಗಳನ್ನು ಸಮನಾಗಿ ಕಾಣುವಂತಹವನು. ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರಿಗಾಗಿ ಒಂದೂವರೆ ಕೋಟಿ ವೆಚ್ಚದಲ್ಲಿ ಹಜ್ ಭವನ ನಿರ್ಮಾಣ, ಕಾಗಿನೆಲೆಯಲ್ಲಿ ಕನಕದಾಸರ ಪ್ರತಿಷ್ಠಾನದ ಅಭಿವೃದ್ಧಿಗಾಗಿ 10 ಕೋಟಿ ಕೊಟಿ, ಎಲ್ಲಾ ವರ್ಗಗಳಿಗೂ ಸಮಾನ ಆದ್ಯತೆ ನೀಡಿ ರಾಜ್ಯದ ಜನರ ಹಿತ ಕಾಪಾಡುವ ಕೆಲಸ ಮಾಡಿದ್ದೇನೆ ಎಂದರು. ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಡಾ ಪರಮಶಿವಯ್ಯನವರ ವರದಿಯ ಅನುಷ್ಠಾಕ್ಕಾಗಿ ಬಜೆಟ್‌ನಲ್ಲಿ 200 ಕೋಟಿ ಮೀಸಲಿಟ್ಟಿದ್ದು, ಜಿಲ್ಲೆಯ ಜನರ ಜೀವನಾಡಿಯಾದ ಹಾಲಿಗೆ 4 ಬೆಂಬಲ ಬೆಲೆ ನೀಡಿದೆ. ಮುಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ರೇಷ್ಮೆಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿದರು.
ಈಗಿನ ಸರ್ಕಾರ ನನ್ನ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುತ್ತಿದ್ದು, ಜನರು ಧೃತಿಗೆಡಬಾರದು. ಮಾತುಗಳನ್ನು ನಂಬಬಾರದು. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯುವುದೇ ನನ್ನ ಗುರಿಯಾಗಿದೆ ಎಂದು ತಿಳಿಸಿದ ಅವರು, ಕೆಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಶಿಡ್ಲಘಟ್ಟ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಕರ್ಣಶ್ರೀ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ತಾಲೂಕು ಕೆಜೆಪಿ ಕಚೇರಿ ಉದ್ಘಾಟನೆ ನೆರವೇರಿಸಿದರು.
ಕೆಜೆಪಿ ಕಾರ್ಯಕಾರಿಣಿ ಸದಸ್ಯ ಡಿ.ಕೆ.ಶಿವಕುಮಾರ್‌ಗೌಡ ಮಾತನಾಡಿ, ತಾವು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ತಮ್ಮ ಸಂಪತ್ತಿನ ಸ್ವಲ್ಪ ಭಾಗವನ್ನು ಜನರ ಸೇವೆಗೆ ಮುಡಿಪಾಗಿಟ್ಟಿರುವುದಾಗಿ ತಿಳಿಸಿದರು.
ರಾಜ್ಯ ಕೆಜೆಪಿ ಉಪಾಧ್ಯಕ್ಷೆ ಮಧುಶ್ರೀ, ಮುಖಂಡ ಡಾ. ರಾಜೀವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಜೆಪಿ ರಾಜ್ಯ ಎಸಿ ಘಟಕದ ಅಧ್ಯಕ್ಷ ನಾಗರಾಜ್ ಮಲನಾಡಿ, ಮುಖಂಡರಾದ ಬಿ.ಸಿ. ನಂದೀಶ್, ಆಂಜನೇಯರೆಡ್ಡಿ, ವೆಂಕಟರಮಣಪ್ಪ, ಸುಧಾ ಬೆರಗೂರ್ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಶಿಕ್ಷಕರು ಹಾಗೊ ಗಣ್ಯರನ್ನು ಸನ್ಮಾಸಿಸಲಾಯಿತು.