ಶ್ರೀನಿವಾಸಗೌಡರ ಆರೋಪ ನಿರಾಧಾರ: ವರ್ತೂರ್ ಸ್ಪಷ್ಟನೆ
ಕೋಲಾರ: ಮಾಜಿ ಸಚಿವ ಶ್ರೀನಿವಾಸಗೌಡರು ಸೋಲಿನ ಭಯದಿಂದ ತಮ್ಮ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.
ಅವರು ತಾಲೂಕಿನ ಕ್ಯಾಲನೂರು, ಅಂದ್ರಹಳ್ಳಿ, ಚನ್ನಸಂದ್ರ, ಸೀತಿ ಹೊಸೂರು, ಚಂಜಿಮಲೆ ಗ್ರಾಮದ ಜೆಡಿಎಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ನಾಲ್ಕೂವರೆ ವರ್ಷದಿಂದ ಕ್ಷೇತ್ರದಲ್ಲಿರದೆ ಈಗ ಚುನಾವಣೆಗಾಗಿ ಜನರ ಬಳಿಗೆ ಸಚಿವರು ಹೋಗುತ್ತಿದ್ದಾರೆಂದು ಮಾಜಿ ಸಚಿವರು ಡಂಗೂರ ಸಾರುತ್ತಿದ್ದಾರೆ.
ಬಹುಶಃ ಕಣ್ಣು, ಕಿವಿ ನೆಟ್ಟಗೆ ಇಲ್ಲದವರು ಮಾತ್ರ ಈ ರೀತಿ ಅನಗತ್ಯ ಆರೋಪ ಮಾಡುವುದಕ್ಕೆ ಸಾಧ್ಯ, ಮಾಜಿ ಸಚಿವರು ಚಿಕಿತ್ಸೆಗೆ ಒಳಪಡುವುದು ಒಳ್ಳೆಯದೆಂದು ಕಟಕಿಯಾಡಿದ್ದಾರೆ.
ಜನತೆ ನಂಬುವ ರೀತಿಯಲ್ಲಿ ಆರೋಪ ಮಾಡಬೇಕು, ಮತ ಗಳಿಕೆಗಾಗಿ ತಲೆಕೆಟ್ಟವಂತೆ ಮಾತನಾಡುವುದರಿಂದ ಮಾಜಿ ಸಚಿವ ಗೌರವ ಘನತೆಗೆ ಇನ್ನು ಧಕ್ಕೆಯಾಗುತ್ತದೆ. ಕಳೆದ 15 ವರ್ಷಗಳು ನಡೆಸಿದ ಆಡಳಿತದಂತೆಯೇ ನನ್ನ ಆಡಳಿತವಿರುತ್ತದೆ ಎಂದು ಮಾಜಿ ಸಚಿವರು ಭಾವಿಸಿದಂತಿದೆ, ಅದಕ್ಕಾಗಿಯೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು.
ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ನೋಡಿ ಸಹಿಸಲಾಗುತ್ತಿಲ್ಲ, ಮತದಾರರು ಯಾರೂ ಇವರ ಜತೆ ಹೋಗುತ್ತಿಲ್ಲ, ಹಾಗಾಗಿ ಜನತೆಯ ಕಣ್ಣಿಗೆ ಮಣ್ಣೆರೆಚುವ ಸಲುವಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದ ಸಚಿವರು, ನಾನು ಶಾಸಕನಾದ ನಂತರ ವೈಯಕ್ತಿಕ ಬದುಕಿಗಿಂತ ನನಗೆ ರಾಜಕೀಯವಾಗಿ ಸ್ಥಾನ ಮಾನ ನೀಡಿದ ಕೋಲಾರ ಜನತೆಯೇ ಮುಖ್ಯ ಎಂಬ ಉದ್ದೇಶದಲ್ಲಿ ಬದುಕಿದ್ದೇನೆ. ಈಗಲೂ ಹಾಗೇಯೇ ಇದ್ದೇನೆ. ಇಷ್ಟಕ್ಕೂ ಓಟು ಹಾಕಿದ ಜನರನ್ನು ಮರೆತು ಮೋಜು ಮಸ್ತಿ ಮಾಡಲು ನಾನೇನು ಶ್ರೀನಿವಾಸಗೌಡ ಅಲ್ಲ, ಮಾಜಿ ಸಚಿವರು ಇನ್ನಾದರೂ ಆಧಾರ ರಹಿತ ಆರೋಪಗಳನ್ನು ಬಿಡಲಿ ಎಂದು ಸಲಹೆ ಮಾಡಿದ್ದಾರೆ.
ಕ್ಯಾಲನೂರಿನ ರಮೇಶ್, ಮಂಜುನಾಥ್, ಸುರೇಶ್, ವೆಂಕಟೇಶ್, ಕರಗದ ವೆಂಕಟೇಶ್, ಶ್ರೀನಿವಾಸ್, ಕೆ.ಎನ್. ಮಂಜು, ಜಪಲ್ಬಬ್ಬಿ, ಅನಿಲ್, ಅಂಬರಾಸಿರ್, ಶಂಕರಪ್ಪ, ರಾಮಾನುಜ, ಗಣೇಶ್ರಾವ್, ಇನಾಯಿತ್, ನರಸಿಂಹ, ಅಂದ್ರಹಳ್ಳಿಯ ನೀಲಕಂಠ, ಚನ್ನಸಂದ್ರದ ಚಂದ್ರಶೇಖರ್, ಮುರಳಿ, ಗೋಪಿ, ಮಧು, ಎಂ.ಮುರಳಿ, ಮಂಜು, ಸೀತಿ ಹೊಸೂರು ಗ್ರಾಮದ ಮೂರ್ತಿ ನಾಯಕ್, ಮುನಿಸ್ವಾಮಪ್ಪ, ಚಂಜಿಮಲೆಯ ರವಿ, ನಾಗೇಶ್, ಮಂಜು, ಮುನಿರಾಜು, ದೇವರಾಜ್, ಗಜೇಂದ್ರ, ನರಸಿಂಹಮೂರ್ತಿ ಜೆಡಿಎಸ್ ತೊರೆದು ವರ್ತೂರು ಬಣಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ತಾಪಂ ಸದಸ್ಯ ಕೃಷ್ಣಮೂರ್ತಿ, ರಾಜಗೋಪಾಲ್, ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ನಜೀರ್ ಅಹಮದ್, ರಾಜಣ್ಣ, ಡಿ.ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ನಾರಾಯಣಮೂರ್ತಿ ಇದ್ದರು.