ಬಡವರ ತುತ್ತಿಗೆ ಅಧಿಕಾರಿಗಳ ಕುತ್ತು!
ಚಿಕ್ಕಬಳ್ಳಾಪುರ: ನಕಲಿ ಪಡಿತರ ಚೀಟಿ ಗುರುತಿಸುವ ನೆಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರ್ಹ ಪಡಿತರ ಚೀಟಿಗಳನ್ನೂ ರದ್ದು ಮಾಡಿರುವ ಅಧಿಕಾರಿಗಳ ಎಡವಟ್ಟಿನಿಂದ ಬಡ ಜನರು ಕಚೇರಿಗಳಿಗೆ ಅಲೆಯುತ್ತಲೇ ಇದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸೂಕ್ತ ದಾಖಲೆ ಮುಂದಿಟ್ಟುಕೊಂಡು ಅಳಲು ತೋಡಿಕೊಂಡರೂ ಸಾಮಾನ್ಯವಾಗಿ ಸಿಗುತ್ತಿರುವ ಅಸಮರ್ಪಕ ಸ್ಪಂದನೆಯಿಂದ ಕೊನೆಗೆ ಏನೂ ತಿಳಿಯದಂತಾಗಿ ಪರದಾಡುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಗೆ ಹೋಗಿ ನೋಡಿದಾಗ ಇದರ ಸಾಕ್ಷತ್ ದರ್ಶನವಾಗುತ್ತದೆ. ಪ್ರತಿದಿನ ಸಹ ತಮಗೆ ಪಡಿತರ ಚೀಟಿ ಕೊಡಿ ಎಂದು ಕೇಳಿಕೊಳ್ಳುತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಡಜನರು ಮುಗಿ ಬೀಳುತ್ತಿರುವಂತಹುದು ಕಾಣಿಸುತ್ತದೆ. ಅದೇ ರೀತಿ ಸರ್ಕಾರಿ ನೌಕರಿ ಹೊಂದಿರುವವರು, ಆರ್ಥಿಕ ಸ್ಥಿತಿವಂತರಿಗೆ ಬಿಪಿಎಲ್ ಕಾರ್ಡಅನ್ನು ಕೊಡಲಾಗಿದೆ. ಇದರಿಂದ ಅವರು ಯಾವುದೇ ಆತಂಕವಿಲ್ಲದೇ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕೂಲಿ ಮಾಡಿಕೊಂಡು ಬಡ ಜೀವನ ನಡೆಸುತ್ತಿರುವ ನಮ್ಮ ಬಿಪಿಎಲ್ ಕಾರ್ಡನ್ನು ಏಕೆ ರದ್ದು ಮಾಡಲಾಗಿದೆ ಎಂಬ ಪ್ರಶ್ನೆ ಸಹ ಅಲ್ಲಿ ಸಹಜವಾಗಿ ಕೇಳಿ ಬರುತ್ತದೆ. ಜತೆಗೆ ಪಡಿತರ ಚೀಟಿಗಾಗಿ ಅಲೆ ಅಲೆದು ಜನರು ಅನುಭವಿಸುತ್ತಿರುವ ಪರದಾಟ, ಅವರು ವ್ಯಕ್ತಪಡಿಸುವ ಆಕ್ರೋಶದ ಬಗ್ಗೆಯೂ ತಿಳಿದು ಬರುತ್ತದೆ.
ಜಸ್ಟ್ ಸ್ಯಾಂಪಲ್: ಎರಡ್ಮೂರು ದಿನಗಳಿಂದಲೂ ಜಿಲ್ಲಾ ಕೇಂದ್ರಕ್ಕೆ ಪಡಿತರ ಚೀಟಿಗಾಗಿ ಬಂದು ಪರದಾಡುತ್ತಿರುವ ಆರ್. ಚೊಕ್ಕನಹಳ್ಳಿಯ ಮುನಿಯಮ್ಮಳ ಅಸಮಾಧಾನ ಹೇಳ ತೀರದು. ಬಡವಳಾಗಿದ್ದರೂ ಕಳೆದ ಒಂದೂವರೆ ವರ್ಷದ ಹಿಂದೆ ಆಕೆಯ ಪಡಿತರ ಚೀಟಿ ರದ್ದುಪಡಿಸಲಾಗಿದೆ. ಅರ್ಜಿಯನ್ನು ಹಾಕಿದಾಗ ಅಲಾಟ್ಮೆಂಟ್ ಬರಬೇಕು. ಬಂದಾಗ ನಾವೇ ತಿಳಿಸುತ್ತೇವೆ. ನಿಮ್ಮ ಮನೆಗೆ ಪಡಿತರ ಚೀಟಿ ಬರುತ್ತದೆ ಎಂದು ಹೇಳಿಕೊಂಡೇ ಅಧಿಕಾರಿಗಳು ಇಲ್ಲಿಯವರೆಗೂ ಬಂದಿದ್ದಾರೆ. ಎಲ್ಲಿ ಇದುವರೆಗೂ ಪಡಿತರ ಚೀಟಿ ಕೈ ಸೇರಿಲ್ಲ. ನ್ಯಾಯಬೆಲೆ ಅಂಗಡಿಗೆ ಹೋಗಿ ಅನೇಕ ತಿಂಗಳುಗಳೇ ಕಳೆದುಹೋಗಿವೆ. ಹೋಬಳಿ ಕೇಂದ್ರದಿಂದ ಜಿಲ್ಲಾಕೇಂದ್ರಕ್ಕೆ, ಜಿಲ್ಲಾ ಕೇಂದ್ರದಿಂದ ಹೋಬಳಿ ಕೇಂದ್ರಕ್ಕೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸುತ್ತಾಳೆ. ಅಲ್ಲದೆ ಎರಡ್ಮೂರು ದಿನಗಳಿಂದ ಬರುತ್ತಿದ್ದೇನೆ. ನನಗೆ ಊಟ ತಿಂಡಿ ಕೆಲಸ ಏನೂ ಇಲ್ಲದಂತಾಗಿದೆ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ.
ಕಾರು, ಮನೆ, ನಿವೇಶನ ಹೊಂದಿ ಫೈನಾಷಿಯಲ್ ಆಗಿ ಚೆನ್ನಾಗಿ ಇರುವ ನಮ್ಮ ಪಕ್ಕದ ಮನೆಯವರಿಗೆ ಅಧಿಕಾರಿಗಳು ಬಿಪಿಎಲ್ ಕಾರ್ಡು ಕೊಟ್ಟಿದ್ದಾರೆ. ಅದೇ ನಾನು ಎಪಿಎಂಸಿ ಮಾರ್ಕೆಟ್ಗೆ ಹೋಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಕೆಲಸ ಇಲ್ಲಾ ಅಂದ್ರೆ ಉಪವಾಸವೇ ಗತಿ ಎನ್ನುವ ಇಸ್ಮಾಯಿಲ್, ಪರಿಶೀಲನೆಗೆ ಬಂದವರಿಗೆ ನಮ್ಮ ಆರ್ಥಿ ಪರಿಸ್ಥಿತಿ ತಿಳಿಸಿದ್ದರೂ ಕ್ಯಾನ್ಸಲ್ ಮಾಡಿ ಹೋಗಿದ್ದಾರೆ.
ನಾವು ನ್ಯಾಯಬೆಲೆ ಅಂಗಡಿಗೆ ಹೋಗಿ ಕೇಳಿದ ಮೂರು ತಿಂಗಳ ನಂತರ ಇದು ಗೊತ್ತಾಯಿತು. ಹೊಸದಾಗಿ ಅರ್ಜಿ ಹಾಕಿ ಅಂದ್ರು. ಅದೇ ರೀತಿ ಹಾಕಿದ್ದೂ ಆಯಿತು. ಈಗ ತಿರುಗಾಡಿ ಸಾಕಾಗಿದ್ದು, ಇನ್ನೂ ಒಂದು ವಾರದಲ್ಲಿ ಬರುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳು ಮಾಡಿದ ಕೆಲಸಕ್ಕೆ ಕೂಲಿ ಮಾಡೋವರು ಕಚೇರಿಗೆ ತಿರುಗಾಡಿಕೊಂಡಿರಬೇಕು ನೋಡಿ. ದುಡ್ಡು ಇರುವವರಿಗೆ ನೋ ಪ್ರಾಬ್ಲಂ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾನೆ.
ಹೀಗೆ ಪಡಿತರ ಚೀಟಿಗಾಗಿ ಅಲೆದಾಡುತ್ತಿರುವವರ ಬಳಿಗೆ ಹೋಗಿ ಮಾತನಾಡಿಸಿದಾಗ ಒಂದೊಂದು ರೀತಿಯ ವ್ಯಥೆ ಕೇಳಿ ಬರುತ್ತದೆ.
ಬಡವರ ಅನ್ನ ಕಸಿಯದಿರಿ
ವ್ಯಾಪಕವಾಗಿ ನಕಲಿ ಪಡಿತರ ಚೀಟಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಯಾರೂ ಅಲ್ಲಗೆಳೆಯುವುದಿಲ್ಲ. ಈಗಲೂ ಸಹ ಸುಳ್ಳು ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ಪಡೆದಿರುವಂತಹುದು. ಹಾಗೆಯೇ ಬಡ ಜನರಿಂದ ಬಿಪಿಎಲ್ ಪಡಿತರ ಚೀಟಿಯನ್ನು ಒತ್ತೆಯಿಟ್ಟುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿರುವುದೂ ಇದೆ. ಅಷ್ಟೇ ಏಕೆ, ಸಂಬಂಧಪಟ್ಟವರು ಪ್ರಾಮಾಣಿಕವಾಗಿ ಪರಿಶೀಲನೆಯಲ್ಲಿ ಆಳಕ್ಕೆ ಹೋಗಿ ಶೋಧಿಸಿದಾಗ ಸಾಕಷ್ಟು ನ್ಯಾಯಬೆಲೆ ಅಂಗಡಿ ಮಾಲೀಕರ ಬಳಿಯೇ ಅನಧಿಕೃತವಾಗಿ ಪಡಿತರ ಚೀಟಿಗಳಿರುವುದು, ದುರ್ಬಳಕೆಯಾಗುತ್ತಿರುವುದು ಪತ್ತೆಯಾಗುತ್ತದೆ. ಈ ನಿಟ್ಟಿನಲ್ಲಿ ಅನರ್ಹ ಪಡಿತರ ಚೀಟಿ ಗುರುತಿಸಿ ರದ್ದು ಪಡಿಸುವ ವಿಷಯದಲ್ಲಿ ಯಾರದ್ದೇನು ತಕರಾರು ಇಲ್ಲ. ಆದರೆ, ಅಕ್ರಮ ಪಡಿತರ ಚೀಟಿಗಳನ್ನು ರದ್ದುಪಡಿಸುವ ಭರಾಟೆಯಲ್ಲಿ ಬಡ ಜನರೂ ಹೊಂದಿರುವ ಪಡಿತರ ಚೀಟಿಗಳನ್ನು ಸಹ ಹಿಂದೆ ಮುಂದೆ ಯೋಚಿಸದೇ, ಸರಿಯಾಗಿ ಪರಿಶೀಲನೆ ನಡೆಸದೇ ರದ್ದುಪಡಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಬಡ ಜನರಿಂದ ಪಡಿತರ ಚೀಟಿಯನ್ನು ಕಿತ್ತುಕೊಳ್ಳದಿರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪರದಾಡದಿರುವಂತೆ ನೋಡಿಕೊಳ್ಳಬೇಕಾಗಿದೆ ಎನ್ನುವುದು ಎಲ್ಲರ ಒತ್ತಾಯವಾಗಿದೆ.