ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಾಜಕೀಯದಿಂದ ನಿವೇಶನ ವಿತರಣೆಗೆ ಅಡ್ಡಿ

Mainashree
Updated On : 5 Feb 2013, 12:01 pm

ಮಾಲೂರು:  ರಾಜಕೀಯದ ದುರದ್ದೇಶದಿಂದ ಕೆಲವರು ಕೋರ್ಟ್ ಮೆಟ್ಟಿಲು ಹತ್ತಿರುವುದರಿಂದ ಬಡವರಿಗೆ ಹಂಚಲು ಸಿದ್ಧವಾಗಿದ್ದ 1300 ನಿವೇಶನಗಳ ವಿತರಣೆಗೆ ಅಡ್ಡಿಯಾಗಿದೆ. ಈ ಬಗ್ಗೆ ಪಟ್ಟಣದ ಜನತೆ ಪಾಠ ಕಲಿಸುವ ದಾರಿ ದೂರವಿಲ್ಲ ಎಂದು ಶಾಸಕ ಕೃಷ್ಣಯ್ಯ ಶೆಟ್ಟಿ ಹೇಳಿದರು.
ಪಟ್ಟಣದ ರಾಜೀವ್ನಗರ ಹಾಗೂ ಇಂದಿರಾ ನಗರದಲ್ಲಿ ರಾಜೀವ್ಗಾಂಧಿ ವಸತಿ ಯೋಜನೆಯ ವಿಶೇಷ ಅನುದಾನದಲ್ಲಿ ಮಂಜೂರಾಗಿರುವ 2 ಕೋಟಿ ವೆಚ್ಚದ ಕಾಮಗಾರಿಗೆ ಭಾನುವಾರ ರಾತ್ರಿ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಅನುಮತಿ ಪಡೆಯದೆ ಈ ಹಿಂದಿನ ಪುರಸಭೆ ಸರ್ಕಾರ ಮಾಡಿದ್ದ ಆಶ್ರಯ ಯೋಜನೆಯನ್ನು ಸರಿಪಡಿಸಿ ನಿವೇಶನ ನೀಡಲು ಈಗಿನ ಪುರಸಭೆ ಸಿದ್ಧವಾಗಿತ್ತು. ಇದಕ್ಕಾಗಿ  ಹೆಚ್ಚುವರಿ ಜಮೀನನ್ನು ಗುರ್ತಿಸಲಾಗಿತ್ತು. ಆದರೆ, ಬಡವರಿಗೆ ನಿವೇಶನ ನೀಡಿದ ಹೆಸರು ಈಗಿನ ಶಾಸಕರಿಗೆ ಬರಬಾರದೆಂದು ಮುಂದಿನ ಚುನಾವಣೆಯಲ್ಲಿ ಶಾಸಕರಾಗಲು ಹೊರಟವರು ತಮ್ಮ ಹಿಂಬಾಲಕರ ಮೂಲಕ ಕೋರ್ಟ್ಗೆ ಹೋಗಿದ್ದಾರೆ. ಇದರಿಂದ ಯೋಜನೆ ನೆನೆಗುದಿಗೆ ಬೀಳಲು ಕಾರಣರಾಗಿದ್ದಾರೆ ಎಂದರು.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ದಾಖಲೆ ಪ್ರಮಾಣದಲ್ಲಿ ಸರ್ಕಾರದ ಅನುದಾನ ತರಲಾಗಿದೆ.  ರಸ್ತೆಗಳ ಅಭಿವೃದ್ಧಿಗಾಗಿ 120 ಕೋಟಿ ವ್ಯಯ ಮಾಡಲಾಗುತ್ತಿದೆ. ಮಕ್ಕಳಿಗೆ ಬೆಳಗ್ಗಿನ ತಿಂಡಿ, ರೈತರಿಗೆ ಮಧ್ಯಾಹ್ನ ಊಟ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ, ಉಚಿತ ಕಂಪ್ಯೂಟರ್ ಶಿಕ್ಷಣ, ಸಣ್ಣ ಮಕ್ಕಳಿಗೆ ಬೈಸಿಕಲ್, ತೀರ್ಥಯಾತ್ರೆ ದರ್ಶನ ಸೇರಿದಂತೆ ಒಂದಿಲ್ಲೊಂದು ರೀತಿಯಲ್ಲಿ ತಾಲೂಕಿನ ಜನತೆಯ ಋಣ ತೀರಿಸಲು ಕೆಲಸ ಶಾಸಕನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಮಾಡಲಾಗುತ್ತಿದೆ ಎಂದ ಅವರು, ಜನಹಿತ ಕಾರ್ಯಗಳನ್ನು ಚುನಾವಣೆ ವರ್ಷದಲ್ಲಿ ಮಾತ್ರ ಮಾಡುತ್ತಿಲ್ಲ. ಪಟ್ಟಣದಲ್ಲಿ ಒಳಚಂರಡಿ ಕಾಮಗಾರಿ ಪೂರ್ಣವಾಗಿದೆ. ಹಾಳಾಗಿರುವ ಎಲ್ಲ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕಾಮಗಾರಿ ಶೀಘ್ರವಾಗಿ ಪ್ರಾರಂಭವಾಗಲಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಎಲ್ಲೇ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸುವ ಕಾರ್ಯ ಮಾಡಲಾಗುತ್ತದೆ ಎಂದರು. ಪುರಸಭೆ ಅಧ್ಯಕ್ಷೆ ಅಮುದಾ ವೇಣು, ಉಪಾಧ್ಯಕ್ಷ ಸಿ.ಪಿ. ನಾಗರಾಜ್, ಜಿಪಂ ಸದಸ್ಯರಾದ ಯಲ್ಲಮ್ಮ ಸಂಪಂಗಿ, ರಾಮಸ್ವಾಮಿ ರೆಡ್ಡಿ, ಪುರಸಭೆ ಸದಸ್ಯ ಮೋಹನ್, ರಾಮಮೂರ್ತಿ, ಬಾಬು, ಭಾರತಮ್ಮ ನಂಜುಂಡಪ್ಪ, ಅನಿತಾ ನಾಗರಾಜ್, ಎ.ರಾಜಪ್ಪ, ಮುಖಂಡರಾದ ರವಿ, ತಿಪ್ಪಯ್ಯ, ಹನುಮಂತ ರೆಡ್ಡಿ, ವೇಮನ, ತಬಲ ನಾರಾಯಣಪ್ಪ, ಬಾರ್ ಸೋಮಣ್ಣ, ನಯೀಂ, ಫೈರೋಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement