'ಶ್ರೀನಿವಾಸಪುರ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಕ್ರಮ'
ಕೋಲಾರ: ಶ್ರೀನಿವಾಸಪುರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಎಲ್ಲಾ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಮತ್ತು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು.
ತಾಲೂಕಿನ ಚಿಲ್ಲಪನಹಳ್ಳಿ ಗ್ರಾಮದಲ್ಲಿ 7 ಲಕ್ಷ ವೆಚ್ಚದ ಓವರ್ ಹೆಡ್ ಟ್ಯಾಂಕ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಹೋಳೂರು ಹೋಬಳಿಯಲ್ಲಿ 3 ಓವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲಾಗಿದೆ. 1250 ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ತಿಳಿಸಿದರು.
ಹೋಳೂರು ಹೋಬಳಿಯಲ್ಲಿನ ಗ್ರಾಮಗಳಲ್ಲಿ 2 ದಿನಗಳ ಕಾಲ ಪ್ರವಾಸ ಮಾಡಿ ಎಚ್.ಜಿ. ಹೊಸೂರು, ಕೊಂಡಸಂದ್ರ, ಮಾರೇನಹಳ್ಳಿ, ಚಿಲ್ಲಪನಹಳ್ಳಿ, ಗಟ್ಟಹಳ್ಳಿ, ಗಂಗರಸನಹಳ್ಳಿಯಲ್ಲಿ ಓವರ್ ಹೆಡ್ ಟ್ಯಾಂಕ್, ಗಟ್ಟಹಳ್ಳಿ, ಅಣ್ಣೇನಹಳ್ಳಿ, ತೊಂಡಾಲ, ಮುದುವಾಡಿ, ನಾಗನಾಯಕನಹಳ್ಳಿ, ಕಮ್ಮಸಂದ್ರ, ಐತರಾಸನಹಳ್ಳಿ, ಅರಿನಾಗನಹಳ್ಳಿ, ತೊರದೇವಂಡಹಳ್ಳಿ, ಮತ್ತಿಕುಂಟೆ, ಅಣ್ಣಿಹಳ್ಳಿ, ಬೆಳ್ಳಂಬರಿ, ನುಕ್ಕನಹಳ್ಳಿ, ಗಂಗಟ್ಟ ಗೂಳಿಗಾನಹಳ್ಳಿ, ಶ್ಯಾನುಭೋಗನಹಳ್ಳಿ ಹಾಗೂ ಅಗ್ನಿಹಳ್ಳಿಯಲ್ಲಿ ಎರಡು ದಿನ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಪೂರ್ಣಗೊಂಡಿರುವ ಸಿಮೆಂಟ್ ರಸ್ತೆ, ಸಮುದಾಯ ಭವನ, ಸುವರ್ಣ ಗ್ರಾಮ ಯೋಜನೆಯಡಿ ನಿರ್ಮಿಸಿರುವ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರ ವ್ಯಾಪ್ತಿಯ ಹೋಳೂರು ಕ್ಷೇತ್ರದಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ, ಕುಡಿಯುವ ನೀರು ಪೂರೈಕೆ ಮತ್ತು ವಸತಿ ಸೌಲಭ್ಯಕ್ಕಾಗಿ ಮನೆ ಮಂಜೂರಾತಿ ಪತ್ರಗಳು ಮತ್ತು ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಇದೇ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಬಿ.ಮುನಿವೆಂಕಟಪ್ಪ ಅವರು ತಿಳಿಸಿದರು.
ಶಾಸಕರ ಪ್ರವಾಸದಲ್ಲಿ ಜೆಡಿಎಲ್ ಮುಖಂಡರಾದ ಬ್ಯಾಲಹಳ್ಳಿ ಗೋವಿಂದಗೌಡ, ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಅಣ್ಣೀಹಳ್ಳಿ ಕೃಷ್ಣಪ್ಪ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಂಕರೇಗೌಡ, ಮಾಜಿ ಎಪಿಎಂಸಿ ಅಧ್ಯಕ್ಷ ಮುದುವಾಡಿ ಶ್ರೀನಿವಾಸ್, ಜಿಪಂ ಎಂಜಿನಿಯರ್ ಶಿವಕುಮಾರ್, ನ್ಯಾಫೆಡ್ ಅಧಿಕಾರಿ ಬಿ.ಈಶ್ವರರೆಡ್ಡಿ, ತಾ.ಪಂ. ಸದಸ್ಯೆ ಪುಟ್ಟಮ್ಮ, ತೊಂಡಾಲ ಶ್ರೀರಾಮಪ್ಪ, ಚಿಲ್ಲಪನಹಳ್ಳಿ ಸಿದ್ದಪ್ಪ, ನಿರ್ಮಿತಿ ಕೇಂದ್ರದ ರವಿ ಇದ್ದರು.