ಹೆಚ್ಚುವರಿ ಪರೀಕ್ಷಾ ಶುಲ್ಕ ಖಂಡಿಸಿ ಎಸ್ಎಫ್ಐ ಪ್ರತಿಭಟನೆ
ಚಿಕ್ಕಬಳ್ಳಾಪುರ: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಪರೀಕ್ಷಾ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಎಸ್ಎಫ್ಐ ಕಾರ್ಯಕರ್ತರು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಂಚಾಲಕ ಮುನೀಂದ್ರ ಮಾತನಾಡಿ, ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪಿಯು ಮಂಡಳಿ ಉಪ ನಿರ್ದೇಶಕರ ಆದೇಶ ಧಿಕ್ಕರಿಸಿ ಪ್ರಥಮ ಪಿಯು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ 75 ನಿಗದಿ ಮಾಡುವ ಮೂಲಕ ಬಡ, ಕೃಷಿ, ಕೂಲಿ ಕಾರ್ಮಿಕರ ಮಕ್ಕಳ ಶಿಕ್ಷಣ ಕಸಿದುಕೊಂಡು ದರೋಡೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಸುಮಾರು 13 ಸಾವಿರ ಪ್ರಥಮ ಪಿಯು ವಿದ್ಯಾರ್ಥಿಗಳಿದ್ದು, ಒಬ್ಬ ವಿದ್ಯಾರ್ಥಿಯಿಂದ ಕನಿಷ್ಠ 40 ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗೆ 75 ನಿಗದಿಪಡಿಸಿ ಸುಮಾರು 5 ರಿಂದ 6 ಲಕ್ಷದವರೆಗೆ ಲೂಟಿ ಮಾಡಿರುವುದಾಗಿ ಆರೋಪಿಸಿದರು. ಕಾನೂನು ರೀತ್ಯಾ ಪರೀಕ್ಷಾ ಶುಲ್ಕ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಎನ್. ಮುನಿಕೃಷ್ಣಪ್ಪ, ಎಲ್.ಎನ್. ಈಶ್ವರಪ್ಪ, ರಾಜಶೇಖರ್, ರಮೇಶ್, ರಮೇಶ್, ವಿನಯ್, ಅರುಣ್, ಸುದರ್ಶನ್ ಮತ್ತಿತರರು ಭಾಗವಹಿಸಿದ್ದರು.