ಕಾಂಗ್ರೆಸ್ಗೆ ಮುಸ್ಲಿಂರು ಕೇವಲ ಮತ ಬ್ಯಾಂಕ್: ಇಬ್ರಾತ್ತುಲ್ಲ ಖಾನ್
ಬಂಗಾರಪೇಟೆ: ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡಿದೆಯೇ ವಿನಃ ಸಮುದಾಯ ಬೆಳವಣಿಗೆಗೆ ಪೂರಕವಾದ ಯಾವುದೇ ಯೋಜನೆ ಜಾರಿಗೆ ತಂದಿಲ್ಲ. ಆದ್ದರಿಂದ ಈ ಬಾರಿ ಮುಸ್ಲಿಂರ ಮತಗಳು ಮಾರಾಟಕ್ಕಿಲ್ಲ ಎಂಬುದನ್ನು ಚುನಾವಣೆಯಲ್ಲಿ ತೋರಿಸಬೇಕೆಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಬ್ರಾತ್ತುಲ್ಲ ಖಾನ್ ಕರೆ ನೀಡಿದರು.
ಪಟ್ಟಣದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಸಭೆ ಹಾಗೂ ನೂತನ ಪದಾಧಿಗಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಮುಸ್ಲಿಂರನ್ನು ಚುನಾವಣೆಯಲ್ಲಿ ಮಾತ್ರ ಉಪಯೋಗಿಸಿಕೊಂಡು ನಂತರ ಕಾಲಕಸದಂತೆ ನಡೆದುಕೊಂಡಿರುವುದರಿಂದ ಈ ಬಾರಿ ಜೆಡಿಎಸ್ ಬೆಂಬಲಿಸುವ ಮೂಲಕ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿ ಎಂದರು. ಐದು ವರ್ಷಗಳಿಂದ ಜನರ ಹಿತ ಮರೆತು ಭ್ರಷ್ಟಾಚಾರದಲ್ಲೆ ಮುಳುಗಿರುವ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತುಹಾಕಬೇಕೆಂದು ಹೇಳಿದರು.
ಜನತಾ ಪರಿವಾರದಿಂದಲೇ ರಾಜಕೀಯವಾಗಿ ಮೇಲೆ ಬಂದ ಸಿದ್ದರಾಮಯ್ಯ, ಸಿ.ಎಂ.ಇಬ್ರಾಹಿಂ, ಸಚಿವರಾದ ಬಚ್ಚೇಗೌಡ, ಸೋಮಣ್ಣ ಮತ್ತಿತರರು ಇಂದು ಅಧಿಕಾರಕ್ಕಾಗಿ ಅನ್ಯ ಪಕ್ಷಗಳಲ್ಲಿದ್ದಾರೆ. ಅಲ್ಲಿಂದ ಮತ್ತೆ ಜೆಡಿಎಸ್ ಬಾಗಿಲು ತಟ್ಟುವ ಕಾಲ ದೂರವಿಲ್ಲ ಎಂದರು.