ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿಲ್ಲದ ಫಿಲ್ಟರ್ ಮರಳು ದಂಧೆ ಕೆರೆಯಿಂದ ಕಾಡಿಗೆ ಶಿಫ್ಟ್

Rashmi Kasaragodu
Updated On : 5 Feb 2013, 11:58 am


ಕೋಲಾರ: ಜಿಲ್ಲೆಯ ಮುಳಬಾಗಿಲು ಸೇರಿದಂತೆ ಇನ್ನಿತರ ಕಡೆ ಕೆರೆಗಳಲ್ಲಿ ಮರಳು ಫಿಲ್ಟರ್ ದಂಧೆ ನಡೆಯುತ್ತಿರುವುದಕ್ಕೆ ಕಡಿವಾಣ ಹಾಕದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ ಹಾಕಿರುವುದರಿಂದ ಮರಳು ಮಾಫಿಯಾ ಈಗ ತನ್ನ ದಂಧೆಯನ್ನು ಕೆರೆಗಳಿಗೆ ಬದಲಾಗಿ ಅರಣ್ಯ ಪ್ರದೇಶದಲ್ಲಿ ಮುಂದುವರೆಸಿದೆ.
ಅರಣ್ಯ ಇಲಾಖೆಯ ಆಸ್ತಿಯನ್ನು ಸಂರಕ್ಷಣೆ ಮಾಡಲು ಇಲಾಖೆಯಲ್ಲಿ ಸಾಕಷ್ಟು ಅರಣ್ಯ ಸಂರಕ್ಷರು ಇದ್ದರೂ ಮರಳು ಮಾಫಿಯಾದವರು ರಾಜಕಾರಣಿಗಳ ಬೆಂಬಲದಿಂದ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದು ಅಧಿಕಾರಿಗಳು ಮೌನವಾಗಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಕೆರೆಗಳಲ್ಲಿ ಹೂಳು ತೆಗೆಯುವ ನೆಪದಲ್ಲಿ ಮರಳು ವ್ಯಾಪಾರಿಗಳು ಭೂಮಿಯನ್ನು ಬಗೆದು ಅಂತರ್ಜಲ ವಿಷ ಮಾಡಿ ಮರಳು ಸಾಗಾಣೆ ಮೂಲಕ ಜೇಬು ತುಂಬಿಸಿಕೊಳ್ಳುತ್ತಿರುವುದಲ್ಲದೆ, ಸರ್ಕಾರಕ್ಕೂ ನಷ್ಟ ಉಂಟು ಮಾಡುತ್ತಿದ್ದಾರೆ. ಇದನ್ನು ತಡೆಯಬೇಕೆಂದು ಸಾರ್ವಜನಿಕರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಜಿಲ್ಲೆಯ ಉಸ್ತುವಾರಿ ಸಚಿವರು, ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಇದರಿಂದಾಗಿ ಎಚ್ಚೆತ್ತ ಜಿಲ್ಲಾ ಆಡಳಿತ, ಹಾಗೂ ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮರಳು ಸಾಗಾಣೆ ಮಾಡುತ್ತಿದ್ದವರಿಗೆ ಕೂಡಲೇ ತಮ್ಮ ಚಟುವಟಿಕೆ ನಿಲ್ಲಿಸಬೇಕೆಂದು ಹೇಳಿದ್ದರಿಂದ ಕಳೆದ ಎರಡು ತಿಂಗಳಲ್ಲಿ ಕೊಂಚ ಮಟ್ಟಿಗೆ ಮರಳು ಸಾಗಾಣೆ ಕಡಿಮೆಯಾಗಿತ್ತು.  ಪ್ರತಿದಿನ ಕೋಲಾರ ಜಿಲ್ಲೆಯಿಂದ ಬೆಂಗಳೂರಿಗೆ 800 ರಿಂದ 1200 ಲೋಡ್ ಮರಳು ಸಾಗಾಣೆ ಆಗಿ ವ್ಯಾಪಾರಿಗಳಿಗೆ, ರಾಜಕಾರಣಿಗಳಿಗೆ ಹಾಗೂ ಅಧಿಕಾರಿಗಳಿಗೆ ಪ್ರತಿನಿತ್ಯ ಜೇಬಿಗೆ ದುಡ್ಡು ಸೇರುತ್ತಿತ್ತು. ಹೈಕೋರ್ಟ್ ಆದೇಶದ ನಂತರ ಕೆರೆಗಳಲ್ಲಿ ಮರಳು ಫಿಲ್ಟರ್ ದಂಧೆ ಕಡಿಮೆ ಮಾಡಿದ ಮಾಫಿಯಾ ರಂಗೋಲಿ ಕಳೆಗೆ ನುಸುಳಿ ತನ್ನ ಕೈಚಳಕ ತೋರುತ್ತಿರುವುದರಿಂದ ಜಿಲ್ಲಾ ಆಡಳಿತಕ್ಕೆ ಇದರಿಂದ ತಲೆ ನೋವುಂಟಾಗಿದೆ.
ಮರಳು ಮಾಫಿಯಾ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕೊಳವೆ ಬಾವಿ ಕೊರೆಸಿ, ಪೈಪ್ ಲೈನ್ ಮುಖೇನ ಸಮೀಪದ ಕೆರೆಗಳಿಗೆ ನೀರು ಹಾಯಿಸಿಕೊಂಡು ಮರಳು ಫಿಲ್ಟರ್ ಮಾಡುತ್ತಿದ್ದು ಇದರಿಂದ ಕೆರೆಗಳಲ್ಲಿ ಅಂತರ್ಜಲ ಇನ್ನಷ್ಟು ಕುಸಿತಗೊಂಡು ಮುಂದಿನ ಬೇಸಿಗೆಯಲ್ಲಿ ನೀರಿಗೆ ಮತ್ತಷ್ಟು ಹಾಹಾಕಾರ ಉಂಟು ಮಾಡುವ ಸಾಧ್ಯತೆಗಳಿವೆ. ಕೋಲಾರ ತಾಲೂಕಿನ ಕುರುಗಲ್ ವ್ಯಾಪ್ತಿಯ ಮಾಲಿಯಪ್ಪನಹಳ್ಳಿ ಸೇರಿದಂತೆ ಇನ್ನಿತರ ಕಡೆ ಅರಣ್ಯ ಪ್ರದೇಶದಲ್ಲಿ ಮರಳು ದಂಧೆ ನಡೆಯುತ್ತಿದೆ. ಈ ಬಗ್ಗೆ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ, ನಮಗೆ ಕಂದಾಯ ಭೂಮಿ ಅಥವಾ ಕೆರೆಗಳಲ್ಲಿ ಮರಳು ದಂಧೆ ತಡೆಯುವುದಕ್ಕೆ ಅವಕಾಶವಿದೆ, ಅರಣ್ಯ ಇಲಾಖೆಯವರು ಸಹ ಮರಳು ಸಾಗಾಣೆ ನಿಯಂತ್ರಣಕ್ಕೆ ರಚಿಸಿರುವ ತಂಡದಲ್ಲಿ ಇದ್ದಾರೆ. ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇಲ್ಲವೇ ನಮಗೆ ಅನುಮತಿ ನೀಡಿದಲ್ಲಿ ನಾವೇ ದಾಳಿ ಮಾಡುತ್ತೇವೆಂದು ಉತ್ತರ ನೀಡಿದ್ದಾರೆ.
ಹೈಕೋರ್ಟ್ ಆದೇಶದ ನಂತರ ಮರಳು ಫಿಲ್ಟರ್ ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರೆತೆ ಇದೆ, ಆದರೂ ತಹಸೀಲ್ದಾರ್‌ಗಳು ಕರೆದಲ್ಲಿ ನಾವು ಕಾರ್ಯಾಚರಣೆ ಇಲ್ಲವೇ ದಾಳಿಗೆ ಸಿದ್ದ. ಈ ವರ್ಷ ನಮ್ಮ ಇಲಾಖೆಯಿಂದ 14 ಪ್ರಕರಣಗಳಲ್ಲಿ 2.75 ಲಕ್ಷ ರು. ದಂಡ ವಸೂಲಿ ಮಾಡಿದ್ದೇವೆ. ನಮ್ಮ ಟೀಂನಲ್ಲಿ ಇರುವ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದಲ್ಲಿ ದಂಧೆ ನಿಯಂತ್ರಣಕ್ಕೆ ತರಬಹುದೆಂದು ಭೂವಿಜ್ಞಾನ ಮತ್ತು ಗಣಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement