ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಪಂಗಿ ಅಡ್ಡಿ: ದಯಾನಂದ್
ಕೆಜಿಎಫ್: ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಇದೀಗ ಜಿಲ್ಲಾಧಿಕಾರಿಗಳಿಂದ ನೆರವೇರಬೇಕಾದ ಬಸ್ ನಿಲ್ದಾಣ ನಿರ್ಮಾಣದ ಗುದ್ದಲಿಪೂಜೆಗೆ ಶಾಸಕ ವೈ.ಸಂಪಂಗಿ ಪೌರಾಡಳಿತ ಸಚಿವ ಜಾರಕಿಹೊಳಿ ಮೂಲಕ ಅಡ್ಡಿಪಡಿಸುತ್ತಿರುವುದು ಕೆಳಮಟ್ಟದ ರಾಜಕಾರಣ ಎಂದು ನಗರಸಭಾ ಅಧ್ಯಕ್ಷ ಪಿ.ದಯಾನಂದ್ ಕಿಡಿಕಾರಿದ್ದಾರೆ
ಎಂ.ಜಿ ಮಾರುಕಟ್ಟೆ ಕಚೇರಿಯಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ವಶದಲ್ಲಿರುವ ಕೆಜಿಎಫ್ ನಗರಸಭೆ ಕೌನ್ಸಿಲ್ ಬಾಡಿ ಇದೇ ತಿಂಗಳ 12ಕ್ಕೆ ಅವಧಿ ಮುಗಿಯಲಿರುವ ಕಾರಣದಿಂದ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ತೀರ್ಮಾನಿಸಲಾಗಿತ್ತು. ಆದರೆ ನಗರಸಭೆ ಅವಧಿ ಮುಗಿದ ನಂತರ ತಾವೇ ಚಾಲನೆ ನೀಡುವ ಉದ್ದೇಶದಿಂದ ರಾಜಕೀಯ ಲಾಭಕ್ಕಾಗಿ ಶಾಸಕ ವೈ.ಸಂಪಂಗಿ ಅಡ್ಡಿಪಡಿಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಹಾಗೂ ನಗರಸಭಾ ಉಪಾಧ್ಯಕ್ಷ ಎಂ.ಭಕ್ತವತ್ಸಲಂ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಗರಸಭೆಯಿಂದ ಯಾವುದೇ ಅನುಮತಿ ಪಡಯದೇ ಕಾಮಗಾರಿ ಕೆಲಸ ಪ್ರಾರಂಭಿಸಲಾಗಿತ್ತು. ಆದರೆ ದಲಿತರಿಗೆ ಒಳಿತಾಗುವ ದೃಷ್ಟಿಯಿಂದ ತಾವು ತೊಂದರೆ ನೀಡಿಲ್ಲ. ಶಾಸಕ ವೈ.ಸಂಪಂಗಿ ಕೆಜಿಎಫ್ನಲ್ಲಿ ತುಗಲಕ್ ದರ್ಬಾರ್ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಕೆಜಿಎಫ್ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಜಾರಕಿಹೊಳಿ ರಾಜಿನಾಮೆ ನೀಡಲಿ: ಶಾಸಕರಂತೆ ತಾವು ಸಹ ಜನರಿಂದ ಆಯ್ಕೆಯಾಗಿದ್ದೇವೆ, ಅವರಿಗಿರುವ ಅಧಿಕಾರ ನಗರಸಭೆಗೆ ಇದೆ.
ಕೆಜಿಎಫ್ನ ಎಂ.ಜಿ.ಮಾರುಕಟ್ಟೆಯ ಮಳಿಗೆಗಳನ್ನು ಸ್ವಂತಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಪೌರಾಡಳಿತ ಸಚಿವ ಜಾರಕಿಹೊಳಿ ಕೆಜಿಎಫ್ ಪೌರಾಯುಕ್ತರ ಮೂಲಕ ಸದಸ್ಯರ ಸಭೆ ನಡೆಸಿ ಅನುಮೋದನೆ ಮಂಡಿಸಲು ಸೂಚಿಸಿ ಕೋಟ್ಯಂತರ ರುಗಳನ್ನು ಲೂಟಿ ಮಾಡಲು ಹೊರಟಿದ್ದಾರೆ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಎಂ.ಭಕ್ತವತ್ಸಲಂ ನೇತೃತ್ವದಲ್ಲಿ ಅಧ್ಯಕ್ಷ ಪಿ.ದಯಾನಂದ್ ಹಾಗೂ ಸದಸ್ಯರುಗಳೊಂದಿಗೆ 10 ಲಕ್ಷ ವೆಚ್ಚದಲ್ಲಿ ಪ್ರಿಚರ್ಡ್ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಯ್ಯ, ಸದಸ್ಯರುಗಳಾದ ಕುಲಶೇಖರನ್, ಮುರಳಿ, ಜಿ.ಕುಮಾರ್, ಮಣಿಮೇಗಲ, ಸಂಗೀತ ಶ್ರೀನಿವಾಸ್, ವಿಜಯಲಕ್ಷ್ಮೀ, ಪಳನಿ, ಮಂಜುಳಾ, ದೇವಿಗಣೇಶ್, ಶಾಂತಕುಮಾರಿ, ಮಾಜಿ ನಗರಸಭೆ ಅಧ್ಯಕ್ಷ ಅತಾವುಲ್ಲಾ ಸೇರಿದಂತೆ ಇತರೇ ಸದಸ್ಯರುಗಳು ಹಾಜರಿದ್ದರು.