ವಿದ್ಯುತ್ ಶಾಕ್; ಮಹಿಳೆ ಸಾವು ಗ್ರಾಮಸ್ಥರ ಪ್ರತಿಭಟನೆ
ಚಿಕ್ಕಬಳ್ಳಾಪುರ: ಕಾಲೇಜಿನಲ್ಲಿ ಬಾಯ್ಲರ್ ಸ್ವಚ್ಛಗೊಳಿಸಲು ಹೋದ ಮಹಿಳೆಯೊಬ್ಬರು ವಿದ್ಯುತ್ ಶಾಕ್ನಿಂದ ಮೃತಪಟ್ಟಿರುವ ದುರ್ಘಟನೆ ನಗರ ಹೊರ ವಲಯದಲ್ಲಿರುವ (ಬೀಡಗಾನಹಳ್ಳಿ ಕ್ರಾಸ್ ಸಮೀಪ) ನಾಗಾರ್ಜುನ ಕಾಲೇಜಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು ಕೆಲ ಸಮಯ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜಿನಲ್ಲಿ ಕೆಲಸ ಮಾಡುವ ಬೀಡಗಾನಹಳ್ಳಿ ಗ್ರಾಮದ ಪಾರ್ವತಮ್ಮ (28) ಮೃತ ದುರ್ದೈವಿ. ಪಾರ್ವತಮ್ಮ ಮತ್ತು ಆಕೆಯ ಗಂಡ ಮುನಿರಾಜು ಕಾಲೇಜಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಮಂಗಳವಾರ ಮಧ್ಯಾಹ್ನ ಪಾರ್ವತಮ್ಮ ಕಾಲೇಜಿನಲ್ಲಿರುವ ಬಾಯ್ಲರ್ ಸ್ವಚ್ಛಗೊಳಿಸಲು ಹೋಗಿದ್ದರು. ಆ ಸಂದರ್ಭದಲ್ಲಿ ನೀರು ಸೋರಿಕೆಯಾಗುತ್ತಿದ್ದ ಬ್ಲಾಯರ್ ಮುಟ್ಟಿದ್ದ ತಕ್ಷಣ ಕರೆಂಟ್ ಶಾಕ್ ಹೊಡೆದಿದೆ.
ದುರ್ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮದಿಂದ ಕಾಲೇಜಿನತ್ತ ಧಾವಿಸಿ ಬಂದ ಗ್ರಾಮಸ್ಥರು ಕಾಲೇಜಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಕಾಲೇಜಿನವರ ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆ ನಡೆದಿದೆ. ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.