ಹನಿ ನೀರಾವರಿಯಿಂದ ಅಂತರ್ಜಲ ಅಭಿವೃದ್ಧಿ: ಡಿಸಿ
ಕೋಲಾರ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಹನಿ ನೀರಾವರಿ ಸೇರಿದಂತೆ ಹೊಸ ಆಯಾಮಗಳಿಂದ ನೀರಿನ ನಿರ್ವಹಣೆ ಮಾಡಿದರೆ ಅಂತರ್ಜಲ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದರು.
ತೋಟಗಾರಿಕೆ ಇಲಾಖೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ಮಳೆ ಪ್ರಮಾಣ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಲ್ಲಿ ಭಾರೀ ಇಳಿಕೆಯಾಗಿದ್ದು, ಕೇವಲ 700 ರಿಂದ 720ಮಿ.ಮೀ. ನಷ್ಟು ಮಾತ್ರ ಆಗಿದೆ. ಹೀಗಾಗಿ ರೈತರು ತಮ್ಮ ಹೊಲ, ತೋಟಗಳಲ್ಲಿ ಬೀಳುವಂತಹ ಮಳೆಯನ್ನು ಹಿಡಿದಿಟ್ಟುಕೊಳ್ಳಲು ಹೊಂಡ ನಿರ್ಮಿಸಬೇಕೆಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿರುವ ಕೆರೆ, ಕುಂಟೆ ಮತ್ತು ಕಲ್ಯಾಣಿಗಳನ್ನು ಉಳಿಸಿಕೊಂಡರೆ ಜಿಲ್ಲೆಯ ರೈತರು ಪ್ರಗತಿ ಕಾಣಲು ಸಾಧ್ಯ. ಭಾರತ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವುದರಲ್ಲಿ 2 ನೇ ಸ್ಥಾನ ಪಡೆದಿದೆ. ದೇಶದಲ್ಲಿ ರಾಜ್ಯ 2 ನೇ ಸ್ಥಾನ ಪಡೆದಿದೆ. ದೇಶದಲ್ಲಿ ಹಣ್ಣು ಬೆಳೆಯುವುದರಲ್ಲಿ ರಾಜ್ಯದ ಪಾಲು ಶೇ.8 ರಷ್ಟು, ತರಕಾರಿಯಲ್ಲಿ ಶೇ.6 ರಷ್ಟು ಮತ್ತು ಹೂ.ಗಳಲ್ಲಿ ಶೇ.20 ರಷ್ಟು. ಇದರಿಂದ ವಾರ್ಷಿಕ ವಾಹಿವಾಟು 3 ಸಾವಿರ ಕೋಟಿಯಷ್ಟು ಇದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸತ್ರ ನ್ಯಾಯಾಧೀಶ ವೀರಣ್ಣ ಜಿ.ತಿಗಡಿ, ನಗರ ಪ್ರದೇಶಗಳಲ್ಲಿ ಸ್ಥಳದ ಕೊರತೆಯಿಂದ ಮನೆಗಳ ಮುಂದೆ ಉದ್ಯಾನವನಗಳನ್ನು ನಿರ್ಮಾಣ ಮಾಡುವುದೇ ಕಷ್ಟವಾಗಿದೆ ಎಂದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತಪ್ಪಿಸಲು ಜಿಲ್ಲಾಧಿಕಾರಿಗಳು ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ರಮ ಜಾರಿಗೆ ತಂದದ್ದು ಶ್ಲಾಘನೀಯವೆಂದು ಹೇಳಿದರಲ್ಲದೆ, ಜನತೆ ಇಂತಹ ಕಾರ್ಯಗಳಿಗೆ ಕೈ ಜೋಡಿಸಬೇಕೆಂದರು.
ಕೋಲಾರ ಜಿಲ್ಲೆ ಕ್ಷಾಮ ಪೀಡಿತವಾಗಿದ್ದರೂ ಇಲ್ಲಿನ ರೈತರು ಹಗಲು-ರಾತ್ರಿಯೆನ್ನದೆ ಹಣ್ಣು-ತರಕಾರಿ ಬೆಳೆದು ಸಮಾಜದ ಇತರೆ ನಾಗರಿಕರ ಸ್ವಾಸ್ಥ್ಯ ನಿರ್ಮಾಣಕ್ಕೆ ಸಹಕಾರಿಯಾಗಿದ್ದಾರೆ ಎಂದು ಬೆಂಗಳೂರು ಲಾಲ್ಬಾಗ್ ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ತಿಳಿಸಿದರು.
ಜಿಲ್ಲೆಯಲ್ಲಿ ಅಂತರ್ಜಲ 1200 ಅಡಿ ಕುಸಿದರೂ ರೈತರು ಕಷ್ಟ ಪಟ್ಟು ತರಕಾರಿ, ಹಣ್ಣುಗಳು ಮತ್ತು ಹೂಗಳನ್ನು ಬೆಳೆದು ರಾಜ್ಯದಲ್ಲಿ ತೋಟಗಾರಿಕೆ ಇಲಾಖೆಯನ್ನು ಮಾದರಿ ಮಾಡಿದ್ದಾರೆ ಎಂದು ಬಣ್ಣಿಸಿದರು. ತೋಟಗಾರಿಕೆ ಇಲಾಖೆ ಆವರಣದಲ್ಲಿ ತರಕಾರಿ ಬೆಳೆದು ಕೋಲಾರ ಹಿರಿಮೆಯನ್ನು ಎತ್ತಿ ಹಿಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲೆಯ ಪ್ರಗತಿ ಪರ ರೈತರಾದ ಛತ್ರಕೋಡಿಹಳ್ಳಿ ಮುನೇಗೌಡ, ಅರಹಳ್ಳಿ ಗೋಪಾಲಕೃಷ್ಣ, ಹನುಮಂತರೆಡ್ಡಿ, ವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ತೋಟಗಾರಿಕೆ ಇಲಾಖೆಯ ರುದ್ರೇಶ್, ತೋಟಗಾರಿಕೆ ಇಲಾಖೆ ಕಾಲೇಜಿನ ಡೀನ್ ಡಾ.ವಿ.ನಾಚೇಗೌಡ, ಸಂಪತ್ ಗೌಡ ಇದ್ದರು.