ಎಂಜಿ ರಸ್ತೆ ಒನ್ವೇಗೆ ನೂರೆಂಟು ವಿಘ್ನ
ಕೋಲಾರ: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ಎಂ.ಜಿ. ರಸ್ತೆ, ಕಾಳಮ್ಮ ಗುಡಿ ಬೀದಿಯಲ್ಲಿ ಏಕಮುಖ ಸಂಚಾರ ಅನುಷ್ಠಾನಕ್ಕೆ ತಂದು 15 ದಿನ ಕಳೆದಿದ್ದರೂ ದ್ವಿಚಕ್ರ ವಾಹನ ಸವಾರರ ಅಸಹಕಾರದಿಂದ ಪೊಲೀಸರಿಗೆ ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತರುವುದು ಸವಾಲಾಗಿ ಪರಿಣಮಿಸಿದೆ.
ಎಂಜಿ ರಸ್ತೆಯಲ್ಲಿನ ವಾಣಿಜ್ಯೋದ್ಯಮಿಗಳು ಸಂಚಾರ ನಿಯಮ ಪಾಲಿಸುತ್ತಿದ್ದರೂ ಈ ರಸ್ತೆಯಲ್ಲಿ ಮೊದಲಿನಿಂದಲೂ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿರುವವರು ಮಾತ್ರ ಏಕ ಮುಖ ಸಂಚಾರ ವ್ಯವಸ್ಥೆ ಏಕೆ ಜಾರಿಗೆ ತರಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಸುಲಭ ಮಾರ್ಗದಲ್ಲಿ ಸಂಚರಿಸಲು ಪ್ರಯತ್ನಿಸುತ್ತಿರುವುದರಿಂದ ಸಂಚಾರಿ ಪೊಲೀಸರಿಗೆ ದ್ವಿಚಕ್ರ ವಾಹನ ಸವಾರರೊಂದಿಗೆ ಪ್ರತಿನಿತ್ಯ ಮಾತಿನ ಚಕಮಕಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂಜಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿ ಇರುವುದರಿಂದ ಗಾಂಧಿವನದಿಂದ ಎಂಜಿ ರಸ್ತೆ ಮೂಲಕ ಚಂಪಕ್ ವೃತ್ತ, ಅಮ್ಮವಾರಿಪೇಟೆಗೆ ಹೋಗುವುದಕ್ಕೆ ಕಡಿವಾಣ ಹಾಕಲಾಗಿದೆ. ಇನ್ನು ಎಂಜಿ ರಸ್ತೆಯ ಅಜುಬಾಜಿನ ತಿರುವು ರಸ್ತೆಗಳಿಗೆ ಹೋಗಲು ಗೌರಿ ಪೇಟೆ, ಅರಳೇಪೇಟೆ, ದೊಡ್ಡಪೇಟೆಯ ರಸ್ತೆಗಳಲ್ಲಿ ವಾಹನ ಓಡಾಡುವುದಕ್ಕೆ ಅನುಕೂಲವಿದ್ದರೂ ಕೆಲವು ದ್ವಿಚಕ್ರ ವಾಹನ ಚಾಲಕರು ಗಾಂಧಿವನದ ಮೂಲಕವೇ ಹಾದು ಹೋಗುವುದಕ್ಕೆ ಪ್ರಯತ್ನಿಸುತ್ತಿರುವುದರಿಂದ ಸಂಚಾರಿ ಪೊಲೀಸರಿಗೆ ಧಿಕ್ಕು ತೋಚದಂತಾಗಿದ್ದು ವಾಹನ ಚಾಲಕರಿಗೆ ದಂಡ ವಿಧಿಸುವ ಮೂಲಕ ಏಕಮುಖ ಸಂಚಾರ ವ್ಯವಸ್ಥೆ ಫಲಪ್ರದಗೊಳಿಸುವುದಕ್ಕೆ ಚಿಂತನೆ ನಡೆಸಿದ್ದಾರೆ.
ಎಂಜಿ ರಸ್ತೆಯಲ್ಲಿನ 13 ತಿರುವುಗಳಲ್ಲಿ ಈಗಾಗಲೇ ದ್ವಿಚಕ್ರ ವಾಹನಗಳಿಗೆ, ಆಟೋ ಚಾಲಕರಿಗೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ತಿಳಿಸಲು ಸೂಚನಾ ಫಲಕ ಅಳವಡಿಸಲಾಗಿದೆ. ಕೋಲಾರ ನಗರ ಸಿಪಿಐ ಜಗದೀಶ್, ನಗರ ಠಾಣೆಯ ಪಿಎಸ್ಐ ಅಂಬರೀಶ್, ಸಂಚಾರಿ ಪೊಲೀಸರು ವ್ಯಾಪಾರಿಗಳನ್ನು ಸಂಪರ್ಕಿಸಿ ಸಹಕಾರ ಕೋರುತ್ತಿದ್ದಾರೆ. ಗಾಂಧಿ ಉದ್ಯಾನವನ ಮತ್ತು ಚಂಪಕ್ ವೃತ್ತ್ತದಲ್ಲಿ ಸಂಚಾರಿ ಪೊಲೀಸರನ್ನು ಕಾವಾಲು ಹಾಕಿ ಜನತೆಯಲ್ಲಿ ಅರಿವು ಮೂಡಿಸಲಾಗುತ್ತಿದೆ. ಆದರೆ, ವಾಹನಗಳ ಪಾರ್ಕಿಂಗ್ಗೆ ಎಂಜಿ ರಸ್ತೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಪೊಲೀಸರು ರಸ್ತೆ ತಿರುವುಗಳಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿದ್ದು, ಪೊಲೀಸ್ ಅಧಿಕಾರಿಗಳು ಪ್ರಚಾರ ಸಾಮಾಗ್ರಿಗಳನ್ನು ಹಂಚುವ ಮೂಲಕ ಹಾಗೂ ವ್ಯಾಪಾರಿಗಳೊಂದಿಗೆ ಸಂವಾದ, ಚರ್ಚೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದರೆ ಏಕಮುಖ ಸಂಚಾರ ವ್ಯವಸ್ಥೆ ಊರ್ಜಿತಗೊಳ್ಳುವುದು ಕಷ್ಟವಾಗಬಹುದು.