ಬೇಕಾಬಿಟ್ಟಿ ವಿದ್ಯುತ್ ಪೂರೈಕೆ: ಪಂಜು ಹಿಡಿದ ರೈತರು
ಬಂಗಾರಪೇಟೆ: ತಾಲೂಕಿನಲ್ಲಿ ಹತ್ತು ದಿನಗಳಿಂದ ವಿದ್ಯುತ್ ಬೇಕಾಬಿಟ್ಟಿಯಾಗಿ ಕಡಿತವಾಗುತ್ತಿರುವುದರ ವಿರುದ್ಧ ಸಿಡಿದೆದ್ದಿರುವ ರೈತ ಸಂಘದ ಮುಖಂಡರು ಬುಧವಾರ ರಾತ್ರಿ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ಮಾಡಿ ಪ್ರತಿಭಟಿಸಿದರು.
ಪಟ್ಟಣದ ಕುವೆಂಪು ವೃತ್ತದಿಂದ ಆರಂಭವಾದ ಪಂಜಿನ ಮೆರವಣಿಗೆ ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕು ಬರಪೀಡಿತ ತಾಲೂಕಾಗಿದ್ದರೂ ಸರ್ಕಾರ ಈ ತಾಲೂಕಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಪ್ರತಿ ವರ್ಷ ಬರಗಾಲಕ್ಕೆ ಸಿಲುಕುವ ರೈತರು ಲಭ್ಯವಿರುವ ಕೊಳವೆ ಬಾವಿಗಳಿಂದ ನೀರನ್ನು ಮೇಲೆತ್ತಿ ವ್ಯವಸಾಯ ಮಾಡುವಂತಾಗಿದೆ. ಸರ್ಕಾರ ರೈತರ ಬೆಳೆಗಳಿಗೆ ವಿದ್ಯುತ್ ನೀಡುವುದಾಗಿ ಹೇಳಿದಂತೆ ನೀಡುತ್ತಿಲ್ಲ ಇದರಿಂದ ಸಾಲ ಮಾಡಿ ಬೇಸಾಯ ಮಾಡಿರುವ ಬೆಳೆಗಳು ನೀರಿಲ್ಲದೆ ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಮಕ್ಕಳಿಗೆ ಪರೀಕ್ಷೆ ವೇಳೆಯಾಗಿರುವುದರಿಂದ ಅವರು ರಾತ್ರಿ ವೇಳೆ ಓದಿಕೊಳ್ಳಲು ಆಗದೆ ತೊಂದೆರೆಗೆ ಹೀಡಾಗಿ ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ. ರೈತರಿಗೆ ವಿದ್ಯಾರ್ಥಿಗಳಿಗೆ ಅಲ್ಲದೆ ವ್ಯಾಪಾರಿಗಳಿಗೂ ತೊಂದರೆಯಾಗಿದೆ ಎಂದರು.ಪ್ರತಿಭಟೆನೆಯಲ್ಲಿ ತಾಲೂಕು ಅಧ್ಯಕ್ಷ ರಾಮೇಗೌಡ, ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಆಂಜಿ, ಲಕ್ಷ್ಮಣ್,ನಾಗರಾಜ್, ಚಲಪತಿ, ವೆಂಕಟೇಶಪ್ಪರಾಮಚಂದ್ರ, ಕೃಷ್ಣಪ್ಪ, ಸುರೇಶ್ ಮತ್ತಿತರರು ಇದ್ದರು.