ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮ್ಮೇಳನ ಲಾಂಛನ ಬಿಡುಗಡೆ

Rashmi Kasaragodu
Updated On : 7 Feb 2013, 12:00 pm





ಕೋಲಾರ: ಮಾಲೂರಿನಲ್ಲಿ ಇದೇ ಫೆ.23 ಮತ್ತು 24 ರಂದು ಎರಡು ದಿನ ನಡೆಸಲು ಉದ್ದೇಶಿಸಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದ ಅರವಿಂದ ಕಟ್ಟಿ ರಚಿಸಿಕೊಟ್ಟಿರುವ ಸುಂದರವಾದ ಹಾಗೂ ಅತ್ಯಾಕರ್ಷಕ ಲಾಂಛನವನ್ನು ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು ಲಾಂಛನ ಬಿಡುಗಡೆ ಮಾಡಿ, ಜಿಲ್ಲಾ ಆಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕನ್ನಡದ ನುಡಿ ತೇರು ಯಶಸ್ವಿಯಾಗಲು ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಹಕಾರ ಸಿಗಲಿದೆ. ಅದೇ ರೀತಿ ಜಿಲ್ಲೆಯ ಜನತೆ ಎರಡು ದಿನಗಳ ಸಮ್ಮೇಳನದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಬೇಕೆಂದು ಕರೆ ನೀಡಿದರು.
ಮಾಲೂರು ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು, ಸರ್ಕಾರಿ ನೌಕರರು, ಶಿಕ್ಷಕರು ಎರಡೂ ದಿನ ಸಕ್ರಿಯವಾಗಿ ಭಾಗವಹಿಸಬೇಕು, ಪ್ರತಿನಿಧಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಬೇಕು, ಸ್ಥಳೀಯ ಸಾಹಿತಿಗಳು, ಕಲಾವಿದರಿಗೆ ಹಾಗೂ ಕವಿಗೋಷ್ಠಿ ಸೇರಿದಂತೆ ಸಮ್ಮೇಳನದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕಲ್ಪಿಸಲು ಜಿಲ್ಲಾ ಕಸಾಪ ಪದಾಧಿಕಾರಿಗಳು ಗಮನ ನೀಡಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್ ಮಾತನಾಡಿ, ಸಮ್ಮೇಳನದ ಲೆಕ್ಕಪತ್ರಗಳು ಪಾರದರ್ಶಕವಾಗಿರುತ್ತದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ಅಂದಾಜು 20 ಲಕ್ಷ ಬೇಕಾಗುತ್ತದೆ, ಕೇಂದ್ರ ಸಮಿತಿಯಿಂದ 5 ಲಕ್ಷ ರು. ಅನುದಾನ ಸಿಗಲಿದ್ದು, ಉಳಿದ ಹಣವನ್ನು ದಾನಿಗಳಿಂದ ಹಾಗೂ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವ ಜಾಹಿರಾತಿನಿಂದ ಸಂಗ್ರಹಣೆ ಮಾಡಬೇಕಾಗಿದ್ದು, ವಿವಿಧ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಮಾಲೂರು ಪುರಸಭೆಯ ಮುಖ್ಯಾಧಿಕಾರಿ ರುದ್ರಮುನಿ ಅವರು ಸಮ್ಮೇಳನಕ್ಕೆ ಅಗತ್ಯ ದೇಣಿಗೆಯನ್ನು ನೀಡುವುದಾಗಿ ಹಾಗೂ ಕುಡಿಯುವ ನೀರು, ಸ್ವಚ್ಛತೆಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಪರವಾಗಿ ಕಲಾವಿದ ವಿಷ್ಣು ಮಾತನಾಡಿ, ಅಧಿಕಾರಿಗಳು ನುಡಿದಂತೆ ನಡೆಯಬೇಕು, ಸಮ್ಮೇಳನಕ್ಕೆ ತಾವು 500 ಕೆಂಪು ಮತ್ತು ಹಳದಿ ಬಣ್ಣದ ಶಾಲುಗಳನ್ನು ನೀಡುವುದಾಗಿ ಘೋಷಣೆ ಮಾಡಿದರು. ನೆನಪಿನ ಕಾಣಿಗೆಗೆ ಬದಲು ಜಿಲ್ಲೆಯ ಲೇಖಕರು ಬರೆದು ಮುದ್ರಿಸಿರುವ ಕೃತಿಗಳನ್ನು ಕಾಣಿಕೆಯಾಗಿ ನೀಡುವುದು ಒಳ್ಳೆಯದು ಎಂದು ಕೆ.ನರಸಿಂಹಮೂರ್ತಿ ಸಲಹೆ ನೀಡಿದಾಗ ಅನೇಕರು ಸಮ್ಮತಿಸಿದರು, ಸಾಹಿತಿ ಮಂಜು ಕನ್ನಕಾ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಬಳಿ ಇರುವ ಕೃತಿಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದರು. ಮಂಜು ಕನ್ನಿಕಾ ಅವರು ಸಮ್ಮೇಳನದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದಾಗ, ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್, ಮಹಿಳೆಯರಿಗೆ ಕವಿಗೋಷ್ಠಿ ಹಾಗೂ ಸಮಾಂತರ ಗೋಷ್ಟಿಯಲ್ಲಿ ಅವಕಾಶ ನೀಡುವುದಾಗಿ ಹೇಳಿದರು.
ಮಾಜಿ ಜಿಲ್ಲಾಧ್ಯಕ್ಷ ರಾಮಪ್ರಸಾದ್ ಅವರು ಬಂಗಾರಪೇಟೆಯಲ್ಲಿ ನಡೆದ 11ನೇ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿ, ಕ್ರಿಯಾ ಯೋಜನೆ ಪ್ರಕಾರ ಹಣ ಸಂಗ್ರಹ ಮಾಡದಿದ್ದರೆ ಸಮ್ಮೇಳನ ಯಶಸ್ವಿಯಾಗುವುದಿಲ್ಲ ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅವರು, ಸಮ್ಮೇಳನ ನೆಪದಲ್ಲಿ ಸಾಂದರ್ಭಿಕ ರಜೆ ಪಡೆಯುವ ಶಿಕ್ಷಕರು ಮತ್ತು ಸರ್ಕಾರಿ ನೌಕರರು ಕಡ್ಡಾಯವಾಗಿ ಎರಡು ದಿನ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಮತ್ತು ಸಂಘಟಕರು ಪ್ರತಿನಿಧಿಗಳಿಗೆ ಮೊದಲ ದಿನವೇ ನೆನಪಿನ ಕಾಣಿಕೆ ನೀಡದೆ, ಸಮಾರೋಪ ಸಮಾರಂಭದ ನಂತರ ವಿತರಣೆ ಮಾಡುವುದು ಒಳ್ಳೆಯದೆಂದು ನುಡಿದರು.
ವಕೀಲ ನಾಗೇಂದ್ರ ಬಾಬು ಅವರು ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳು ಜಿಲ್ಲೆಯ ಪ್ರಗತಿಯನ್ನು ಪ್ರತಿಬಿಂಬಿಸುವಂತೆ ಇರಬೇಕು, ಇದು ಸಮುದಾಯದ ಕಾರ್ಯಕ್ರಮವಾಗಬೇಕೆಂದರೆ, ಪತ್ರಕರ್ತ ನಾಗರಾಜ್ ಪುಸ್ತಕ ಮಳಿಗೆಗಳು ವ್ಯವಸ್ಥಿತವಾಗಿರಬೇಕು, ರಿಯಾಯ್ತಿ ದರದಲ್ಲಿ ಓದುಗರಿಗೆ ಪುಸಕ್ತಗಳು ಸಿಗಬೇಕೆಂದರು. ದಮರುಗ ಹರೀಶ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್ದಾಸ್, ಕಲಾವಿದ ಅರವಿಂದಕಟ್ಟಿ, ಕಸಾಪ ಖಜಾಂಚಿ ಪುರುಷೋತ್ತಮ್, ಅರಣ್ಯ ಇಲಾಖೆಯ ಅಧಿಕಾರಿ ಮುನೇಗೌಡ, ಜಿ.ಪಂ ಉಪ ಕಾರ್ಯದರ್ಶಿ ಬದನೂರು, ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸಯ್ಯ, ಕಸಾಪ ಪದಾಧಿಕಾರಿಗಳಾದ,ಮಧುಸೂದನ್, ಡಾ.ಶಿವಪ್ಪ, ಜನಾರ್ಥನ್, ಬದರಿನಾಥ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕದಿರೇಗೌಡ, ಕೋಚಿಮುಲ್ ಪರವಾಗಿ ನಾಗೇಶ್, ಜಿ.ಪಂ ಸದಸ್ಯ ರಾಮಸ್ವಾಮಿರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳಿಂದ ಅಧಿಕಾರಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಸ. ರಘುನಾಥ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement