ಸಹಕಾರಿ ಕ್ಷೇತ್ರ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ
ಚಿಕ್ಕಬಳ್ಳಾಪುರ: ಸಹಕಾರಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕೆ.ಎಂ.ಎಫ್. ನಿರ್ದೇಶಕ ಕೆ.ವಿ.ನಾಗರಾಜ್ ತಿಳಿಸಿದರು.
ನಗರದ ಕೆ.ಎಂ.ಎಫ್ ಶಿಬಿರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಇತ್ತೀಚಿನ ಸಂವಿಧಾನ ತಿದ್ದುಪಡಿ ಕುರಿತು ಒಂದು ದಿನದ ವಿಶೇಷ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಕೋ ಅಪರೇಟಿವ್ ಸೊಸೈಟಿಗಳಲ್ಲಿ ಕೆಲಸ ಮಾಡುತ್ತಿರುವವರು ಸಂವಿಧಾನದ ತಿದ್ದುಪಡಿಯನ್ನು ತಿಳಿದುಕೊಳ್ಳಬೇಕು. ಕಾನೂನು ಕಾಯ್ದೆಗಳನ್ನು ಸಮರ್ಪಕವಾಗಿ ತಿಳಿದುಕೊಂಡಾಗ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದೆಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ 2 ಜಿಲ್ಲೆಗಳಲ್ಲಿ ಲಕ್ಷಾಂತರ ಮಂದಿ ಕೃಷಿಯನ್ನು ಅವಲಂಬಿಸಿದ್ದು ಈ ಜಿಲ್ಲೆಗಳು ಹಲವು ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿವೆ. ಇದರಿಂದ ಇಲ್ಲಿ ವ್ಯವಸಾಯ ನಂಬಿ ಜೀವನ ಸಾಗಿಸುತ್ತಿರುವವರು ಬೇರೆಡೆ ವಲಸೆ ಹೋಗುತ್ತಿದ್ದಾರೆ. 1 ಸಾವಿರ ಅಡಿ ಕೊಳವೆಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ, ನೀರು ದೊರೆತರೂ 1 ಸಾವಿರ ಅಡಿಯಿಂದ ನೀರನ್ನು ಮೇಲೆತ್ತಲು ವಿದ್ಯುತ್ ಸಮಸ್ಯೆ ಇದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮಳ್ಳೂರು ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ಕೆಂಪಣ್ಣ, ಎಂ. ನಾರಾಯಣಸ್ವಾಮಿ, ಕೆಎಂಎಫ್ ಉಪ ವ್ಯವಸ್ಥಾಪಕ ಡಾ. ಕೆ.ವಿ. ರವಿ, ಮದನಗೋಪಾಲ್ ರೆಡ್ಡಿ ಮುಂತಾದವರು ಭಾಗವಹಿಸಿದ್ದರು.