ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ
ಬಂಗಾರಪೇಟೆ: ರೈಲಿನಿಂದ ಬಿದ್ದು ಸಾವನ್ನಪ್ಪಿದ ವ್ಯಕ್ತಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ಲಭ್ಯವಿಲ್ಲದಿರುವುದನ್ನು ಖಂಡಿಸಿ ರೈತ ಸಂಘದ ಮುಖಂಡರು ಸಾರ್ವಜನಿಕ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
ಶುಕ್ರವಾರ ಮುಂಜಾನೆ ಕೋಲಾರ ನಿವಾಸಿ ಸಾಲರ್ ಷರೀಫ್ (70) ಎಂಬವರು ಗುಲ್ಬರ್ಗಕ್ಕೆ ಹೋಗಿ ಮರಳಿ ಕೋಲಾರಕ್ಕೆ ಬರಲು ಗುರುವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಬಂದಿದ್ದು, ಪಟ್ಟಣದ ನಿಲ್ದಾಣದಲ್ಲಿ ರೈಲು ನಿಲ್ಲಿಸಿದಾಗ ನಿದ್ರೆ ಮಾಡುತ್ತಿದ್ದುದರಿಂದ ಇಳಿದಿಲ್ಲ. ರೈಲು ಚಲಿಸಿದ ಬಳಿಕ ಎಚ್ಚರಗೊಂಡು ಇಳಿಯಲು ಯತ್ನಿಸಿ ಬಿದ್ದು ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತ ಪರೀಕ್ಷೆ ನಡೆಸಲು ತಂದರೆ, ಆಸ್ಪತ್ರೆಯ ವೈದ್ಯರಿಂದ ಸಿಬ್ಬಂದಿಯೆಲ್ಲ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿಢೀರ್ ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ಶವವನ್ನು ಆಸ್ಪತ್ರೆ ಗೇಟಿನ ಮುಂಭಾಗದಲ್ಲೇ ಇರಿಸಲಾಗಿತ್ತು.
ಇದನ್ನು ಕಂಡು ರೈತ ಸಂಘದ ಅಧ್ಯಕ್ಷ ರಾಮೇಗೌಡ ನೇತೃತ್ವದಲ್ಲಿ ಹಲವಾರು ಮುಖಂಡರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ವೈದ್ಯರ ಈ ನಿರ್ಧಾರದಿಂದಾಗಿ ನೂರಾರು ಬಡ ರೋಗಿಗಳು ಚಿಕಿತ್ಸೆ ದೊರೆಯದೆ ಪರದಾಡುವಂತಾಗಿದೆ. ಅಲ್ಲದೆ ತುರ್ತು ಚಿಕಿತ್ಸೆ ಸಹ ದೊರೆಯುತ್ತಿಲ್ಲ ಎಂದು ಖಂಡಿಸಿದರು. ನಂತರ ವಿಧಿಯಿಲ್ಲದೆ ಶವವನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತು.
ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಯ ಹಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶುಕ್ರವಾರ ಮುಂಜಾನೆಯಿಂದ ತಾಲೂಕಿನಾದ್ಯಂತ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳಿಗೆ ಬೀಗ ಹಾಕಿರುವುದರಿಂದ ಬಡ ರೋಗಿಗಳು ತುರ್ತು ಚಿಕಿತ್ಸೆಗಾಗಿ ದುಬಾರಿ ಬೆಲೆ ಕೊಟ್ಟು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿತ್ತು. ತುರ್ತು ಸೇವೆಗಳಿಗೆ ನಿರ್ಬಂಧವಿಲ್ಲ ಎಂದು ಹೇಳಿದ್ದರೂ ಇಲ್ಲಿ ಯಾವುದೇ ಸೇವೆಗಳು ಲಭ್ಯವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಸರ್ಕಾರ ಕೂಡಲೆ ವೈದ್ಯರ ಬೇಡಿಕೆಗಳನ್ನು ಬಗೆಹರಿಸಿ ಬಡವರ ಪ್ರಾಣ ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.