ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ: ಜೆಡಿಎಸ್ ಪ್ರತಿಭಟನೆ
ಕೋಲಾರ: ತಾಲೂಕಿನ ದೊಡ್ಡ ಹಸಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತಾಲೂಕು ಪಂಚಾಯಿತಿ ಇಓ ಅಡ್ಡಗಾಲು ಹಾಕಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವರ್ತೂರು ಪ್ರಕಾಶ್ ಕುಮ್ಮಕ್ಕು ನೀಡಿರುವುದೇ ಕಾರಣವೆದು ಆರೋಪಿಸಿ ಜೆಡಿಎಸ್ ವತಿಯಿಂದ ದೊಡ್ಡಹಸಾಳ ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸಲಾಯಿತು.
ಅಭಿವೃದ್ಧಿ ಕಾಮಗಾರಿಗಳ ಬಿಲ್ಗಳಿಗೆ ಮಂಜೂರಾತಿ ನೀಡಬೇಕೆಂದು ದೊಡ್ಡಹಸಾಳ ಗ್ರಾಪಂ ಅಧ್ಯಕ್ಷೆ ಮಂಜುಳ ನೇತೃತ್ವದಲ್ಲಿ ಸದಸ್ಯರುಗಳು ಹಾಗೂ ಜೆಡಿಎಸ್ ಮುಖಂಡರು ಗ್ರಾ.ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ದೊಡ್ಡಹಸಾಳ ಗ್ರಾ.ಪಂ ವ್ಯಾಪ್ತಿಯ ಬೆಗ್ಲಿ ಹೊಸಹಳ್ಳಿ ಮತ್ತಿತರೆ ಗ್ರಾಮಗಳಲ್ಲಿ ಬೀದಿದೀಪ ಮತ್ತು ಕುಡಿಯುವ ನೀರಿನ ಕಾಮಗಾರಿ ವಿಚಾರದಲ್ಲಿ 18 ಸದಸ್ಯರುಗಳ ಪೈಕಿ 15 ಸದಸ್ಯರುಗಳು ಸಭೆಯಲ್ಲಿ ಬಿಲ್ಗಳಿಗೆ ಸರ್ವಾನುಮತದಿಂದ ತೀರ್ಮಾನವಾಗಿದ್ದರೂ ತಾಪಂ ಇಓ ಭಟ್ ಅವರು ಬಿಲ್ಗಳಿಗೆ ಮಂಜೂರು ಮಾಡದಂತೆ ಪಂಚಾಯ್ತಿ ಅಧಿಕಾರಿಗೆ ನೋಟೀಸ್ ನೀಡಿರುವುದನ್ನು ಪ್ರತಿಭಟನಕಾರರು ಖಂಡಿಸಿದರು.
ಸ್ಥಳಕ್ಕೆ ಆಗಮಿಸಿದ ಜಿ.ಪಂ ಅಧ್ಯಕ್ಷೆ ಚೌಡೇಶ್ವರಿ ರಾಮು ಪ್ರತಿಭಟನಕಾರರ ಮನವಿಯನ್ನು ಆಲಿಸಿ ಪಿಡಿಓ ಅವರನ್ನು ತೀವ್ರವಾಗಿ ತರಾಟೆಗೆ ತೆಗದುಕೊಂಡರು. ಪಂಚಾಯ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಒಟ್ಟಿಗೆ ಇದ್ದರೂ ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿದು ಬಿಲ್ಗಳನ್ನು ತಡೆಯುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ, ಮುಂದೆ ಬರುವ ಬೇಸಿಗೆಯಲ್ಲಿ ಮತ್ತಷ್ಟು ಅಭಾವ ಉಂಟಾಗಲಿದೆ, ವಿದ್ಯುತ್ ಸಮಸ್ಯೆ ತೀವ್ರವಾಗಿದೆ, ಇಂತಹ ಸಮಸ್ಯೆಗಳ ಬಗ್ಗೆ ಗಮನ ಕೊಟ್ಟು ಜನತೆಗೆ ಒಳ್ಳೆಯದು ಮಾಡುವುದು ಬಿಟ್ಟು ಪಕ್ಷಭೇದ ಮಾಡುವುದರಿಂದ ಯಾರಿಗೂ ಒಳ್ಳೆಯದಾಗುವುದಿಲಛ್ಲ, ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಕಿಡಿಕಾರಿದರು.
ಸಚಿವರು ಎಲ್ಲೋ ಕುಳಿತುಕೊಂಡು ಅಭಿವೃದ್ಧಿ ವಿಚಾರಗಳನ್ನು ಮಾತನಾಡುವುದನ್ನು ನಿಲ್ಲಿಸಲಿ. ಸಚಿವರಿಗೆ ಏನಾದರೂ ಕಾಳಜಿ ಇದ್ದರೆ ದೊಡ್ಡಹಸಾಳ ಗ್ರಾಮ ಪಂಚಾಯಿತಿ ಆರಂಭದಿಂದಲೂ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಲಿ, ಸಚಿವರ ಬೆಂಬಲಿಗರೇ ನೀರು ಸರಬರಾಜಿನಲ್ಲಿ ಎಷ್ಟು ಕಳ್ಳ ಬಿಲ್ಲುಗಳನ್ನು ಮಾಡಿಕೊಂಡಿದ್ದಾರೆ ಎಂಬುದು ಬಯಲಿಗೆ ಬರುತ್ತದೆ ಎಂದು ಹೇಳಿದರು.
ಹಾಲಿ ಸದಸ್ಯ ಚೆನ್ನಕೇಶವ, ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ಚೋಳಘಟ್ಟ ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಈರಪ್ಪ, ಅರ್ಜುನ್ ಪ್ರತಿಭಟನೆಯಲ್ಲಿದ್ದರು.