ಅಸಮರ್ಪಕ ವಿದ್ಯುತ್: ಪ್ರತಿಭಟನೆ (ಸುದ್ದಿ ಸಂಕ್ಷೇಪ )
ಕೋಲಾರ: ಜಿಲ್ಲಾದ್ಯಂತ ಒಂದು ತಿಂಗಳಿನಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರ ಬೆಳೆಗಳು ಒಣಗಿ ಕರಕಲಾಗುತ್ತಿವೆ. ವಿದ್ಯಾರ್ಥಿಗಳ ಬದುಕು ನಾಶವಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ರೈತ ಸಂಘದ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯುತ್ ಸಮಸ್ಯೆದಿಂದ ಪಂಪ್ಸೆಟ್ಗಳು ಸುಟ್ಟು ಹಾಳಾಗಿರುವುದಲ್ಲದೆ ಬೆಳೆಗಳು ಒಣಗಿ ನಷ್ಟವಾಗಿವೆ. ಗ್ರಾಮೀಣ ಪ್ರದೇಶದ ಕೊಳವೆ ಬಾವಿಗಳಿಗೆ 6 ಗಂಟೆ 3 ಫೇಸ್, 5 ಗಂಟೆ, ಸಿಂಗಲ್ ಪೇಸ್ ವಿದ್ಯುತ್ಅನ್ನು ಅಡಚಣೆ ಇಲ್ಲದೇ ನೀಡಬೇಕೆಂದು ಸಂಘದ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಹೂವಳ್ಳಿ ನಾಗರಾಜ್ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ನಾರಾಯಣಗೌಡ, ಮುಖಂಡರಾದ ಬಂಗವಾದಿ ನಾಗರಾಜಗೌಡ, ಡಿ.ಪ್ರಜ್ವಲ್, ರಂಜಿತ್, ನಂದಿನಿ, ತ್ರಿವೇಣಿ, ಐತಂಡಹಳ್ಳಿ ಉದಯ್ ಇದ್ದರು.
ತಾಲೂಕು ವೈದ್ಯರು, ನೌಕರರ ಮುಷ್ಕರ
ಮಾಲೂರು: ಇಲಾಖಾ ನೌಕರರ ಅಸ್ತಿತ್ವ ಉಳಿವಿಗಾಗಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿನಲ್ಲಿರುವ 8 ಆರೋಗ್ಯ ಕೇಂದ್ರಗಳು ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳ ವೈದ್ಯರು ಸೇರಿದಂತೆ ಎಲ್ಲ ಹಂತದ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿದ್ದು, ರೋಗಿಗಳು ಪರದಾಡಬೇಕಾಗಿ ಬಂಂತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಗೌಡ ಮಾತ ನಾಡಿದರು. ಡಾ.ಮುನಿವೆಂಕಟ ರಾಜು, ಡಾ.ಮಂಜುನಾಥ್ ಪ್ರಸಾದ್, ಮುನಿರಾಜು, ಗೋವಿಂದು, ವೆಂಕೋಬರಾವ್, ಜಯವೇಣಿ, ಸಿಬ್ಬಂದಿ ಇದ್ದರು.
ಮನೆ ಬೀಗ ಮುರಿದು ಕಳ್ಳತನ
ಕೋಲಾರ: ನಗರದ ಭೋವಿಕಾಲೋನಿಯಲ್ಲಿ ಕಳೆದ ರಾತ್ರಿ ಕಳ್ಳರು ಮನೆಯೊಂದರ ಬೀಗ ಮುರಿದು ನಗ-ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಆರ್.ರಾಜೇಶ್ ಎಂಬವರು ತಮ್ಮ ಮನೆಗೆ ಬೀಗ ಹಾಕಿಕೊಂಡು ನೆಂಟರ ಮನೆಗೆ ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳಗಡೆ ಪ್ರವೇಶ ಮಾಡಿ ಬೀರುವಿನಲ್ಲಿಟ್ಟಿದ್ದ 5 ಜತೆ ಕಾಲು ಚೈನು, 2 ಜತೆ ಕಿವಿಯೋಲೆ, 2 ಮೂಗುನತ್ತು, 5 ಉಂಗುರ ಮತ್ತು 4 ಸಾವಿರ ರು. ನಗದು ಕಳ್ಳತನ ಮಾಡಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧನೆ ಕೈಗೊಂಡಿದ್ದಾರೆ.