ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಜೆಟ್‌ನಲ್ಲಿ ಜಿಲ್ಲೆಗೆ ಪಂಗನಾಮ: ರೈತ ಸಂಘ ಟೀಕೆ

Mainashree
Updated On : 10 Feb 2013, 12:08 pm

ಕೋಲಾರ:  ರಾಜ್ಯ ಬಿಜೆಪಿ ಸರ್ಕಾರ ತನ್ನ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದು 'ರಾಮ ರಾಜ್ಯ ಆಳಿದರೂ, ರಾಗಿ ಬೀಸುವುದು ತಪ್ಪಲಿಲ್ಲ' ಎಂಬ ಗಾದೆಯಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಟೀಕಿಸಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶುಕ್ರವಾರ ಮಂಡಿಸಿರುವ ಬಜೆಟ್‌ನಲ್ಲಿ ಜಿಲ್ಲೆ ಪಾಲಿಗೆ ತೀವ್ರ ನಿರಾಶೆ ಉಂಟು ಮಾಡಿದೆ. ಜಿಲ್ಲೆಗೆ ಹೊಸ ಯೋಜನೆಗಳ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ. ಪರಮಶಿವಯ್ಯನವರ ಶಾಶ್ವತ ನೀರಾವರಿ ಯೋಜನೆಗಾಗಿ ಪೈಸೆಯೂ ಕೊಡದೇ ಎತ್ತಿನಹೊಳೆಗೆ 200 ಕೋಟಿ ಇಟ್ಟು, ಜಿಲ್ಲೆಯ ನೀರಾವರಿ ಕನಸನ್ನು ಭಗ್ನ ಮಾಡಿದ್ದಾರೆ ಎಂದು ಸಂಘದ ಮುಖಂಡರು ಅಭಿಪ್ರಾಯಿಸಿದ್ದಾರೆ.
ರೈತರ 25000 ರು.ಗಳ ಸಾಲ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ, ಜಿಲ್ಲೆಯ ಡಿಸಿಸಿ ಬ್ಯಾಂಕ್ ಈಗಾಗಲೇ ಸಂಪೂರ್ಣ ಮುಳುಗಿರುವುದರಿಂದ ಜಿಲ್ಲೆಯ ರೈತರಿಗೆ ಸಾಲ ಕೊಡುವುದು ಮತ್ತು ಮನ್ನಾ ಮಾಡುವುದು ಕುರುಡನಿಗೆ ಕಣ್ಣು ಬಂದ ಹಾಗೆ ಆಗಿದೆ. ಇನ್ನು ತೋಟಗಾರಿಕಾ ಬೆಳಗಳ ಉತ್ತೇಜನಕ್ಕಾಗಿ ಹನಿ ನೀರಾವರಿಗೆ ಶೇ.100 ರಿಯಾಯಿತಿ ಎನ್ನುವುದು ಗಗನ ಕುಸುಮವಾಗಿದೆ ಎಂದು ತಿಳಿಸಿದ್ದಾರೆ.
10 ಎಚ್.ಪಿ ಪಂಪ್‌ಸೆಟ್‌ಗೆ ವಿದ್ಯುತ್ ಮನ್ನಾ ಯೋಜನೆ ಜಿಲ್ಲೆಯ ರೈತರಿಗೆ ಪ್ರಯೋಜನವಾಗುವುದಿಲ್ಲ. ಕಾರಣ ಜಿಲ್ಲೆಯಲ್ಲಿ 20-25 ಎಚ್.ಪಿ. ಮೋಟಾರ್‌ಗಳಿಂದ 1500 ಅಡಿ ಆಳದಿಂದ ನೀರು ಎತ್ತುತ್ತಿರುವುದರಿಂದ ಈ ಸೌಲಭ್ಯವು ರೈತನಿಗಿಲ್ಲ. ಇನ್ನು ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ವಿಂಗಡಿಸಲಾಗಿದೆ. ಜಿಲ್ಲೆಯಲ್ಲಿ ಜನತೆಯ ಬೇಡಿಕೆಯಂತೆ ಕೆಜಿಎಫ್ ತಾಲೂಕಾಗಿ ಮಾಡದೆ ನಿರಾಸೆ ಮೂಡಿಸಲಾಗಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಬದ್ಧತೆಯ ಕೊರತೆಯು ಕಾರಣ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ನಾರಾಯಣಗೌಡ, ಹಸಿರು ಸೇನೆ ಅಧ್ಯಕ್ಷ ಹುಲ್ಕೂರು ಹರಿಕುಮಾರ್ ಇನ್ನಿತರರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement