ವಿಮಾನಯಾನಕ್ಕೆ ನೆರವಾಗುವ ತಾಂತ್ರಿಕ ಘಟಕ ಸ್ಥಾಪನೆಗೆ 150 ಕೋಟಿ ಬಿಡುಗಡೆ
ಕೆಜಿಎಫ್: ಕೇಂದ್ರ ಸರ್ಕಾರದಿಂದ ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಇಲಾಖೆ ವತಿಯಿಂದ ವಿಮಾನ ಯಾನಕ್ಕೆ ನೆರವಾಗುವ ಅಂತರ ರಾಷ್ಟ್ರೀಯಮಟ್ಟದ ತಯಾರಿಕಾ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ 150 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಕೆಜಿಎಫ್‌ನಲ್ಲಿ ರಾಜ್ಯದಲ್ಲೇ ಪ್ರಥಮ ತಾಂತ್ರಿಕ ತರಬೇತಿ ಕೇಂದ್ರವನ್ನು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ವತಿಯಿಂದ ಸ್ಥಾಪಿಸಿದ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಅದೇ ರೀತಿ ಕೆಜಿಎಫ್‌ನ ನಿರುದ್ಯೋಗಿ ಯುವಕರಿಗೆ ನೆರವಾಗಲು ರಾಜ್ಯದಲ್ಲೇ ಪ್ರಥಮ ತರಬೇತಿ ಕೇಂದ್ರ ಕೆಜಿಎಫ್‌ನಲ್ಲಿ ಸ್ಥಾಪಿಸಲಾಗಿದೆ ಹಾಗೂ ಸಮೂಹ ಅಭಿವೃದ್ಧಿ ಯೋಜನೆಯಡಿ ಕೋಲಾರ ಜಿಲ್ಲೆಯ ಕೋಲಾರ, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು ಭಾಗದಲ್ಲಿ ಆಹಾರ ಸಂಸ್ಕರಣಾ ಘಟಕ, ಟೊಮೆಟೋ ಸಂಸ್ಕರಣಾ ಘಟಕ, ಮಾವು ಸಂಸ್ಕರಣಾ ಘಟಕ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಪ್ರಾರಂಭಿಸಲಾಗುತ್ತದೆ. ಕೇಂದ್ರ ಸರ್ಕಾರದ ವತಿಯಿಂದ 12ನೇ ಪಂಚವಾರ್ಷಿಕ ಯೋಜನೆಯಡಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಈ ಬಾರಿ 100 ರಿಂದ 200 ಮಂದಿಗೆ ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯಡಿ ಕೈಗಾರಿಕಾ ಸ್ಥಾಪನೆಗೆ ಸರ್ಕಾರ ಅಗತ್ಯ ಅನುದಾನ ನೀಡಿದೆ ಮತ್ತು ದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ 25 ಲಕ್ಷ ಸಾಲ ಭದ್ರತಾ ಯೋಜನೆ ಜಾರಿಗೊಳಿಸಿದಲಿದೆ ಎಂದರು. ಕೆಜಿಎಫ್‌ನ ಬಿಜಿಎಂಎಲ್ ಕಾರ್ಮಿಕ ಕುಟುಂಬ ವರ್ಗಕ್ಕೆ ದಿನನಿತ್ಯ ಕೂಲಿಗೆ ತೆರಳುವ ಯುವಕರಿಗೆ ಈ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿ ಸ್ವಯಂ ಉದ್ಯೋಗ ಹಾಗೂ ಉದ್ಯೋಗವಕಾಶ ಕಲ್ಪಿಸಲಾಗುತ್ತದೆ ಎಂದರು. ಕೆಜಿಎಫ್‌ನ ಬಿಜಿಎಂಎಲ್ ಸಮಸ್ಯೆ ವಿಳಂಬವಾಗಲು ಕಾರ್ಮಿಕ ಸಂಘಗಳ ಆಂತರಿಕ ಕಚ್ಚಾಟವೇ ಕಾರಣ ಹಾಗೂ ಈ ಹಿಂದೆಯೇ ಕಾರ್ಮಿಕ ಸಂಘಗಳು ತಮಗೆ ಸಹಕರಿಸಿದರೆ 2-3 ವರ್ಷಗಳ ಹಿಂದೆ ಬಿಜಿಎಂಎಲ್ ಚಿನ್ನದ ಗಣಿಗಳನ್ನು ಪುನರ್ ಪರಿಶೀಲಿಸಲಾಗುತ್ತಿತ್ತು. ಕೆಜಿಎಫ್‌ನಲ್ಲಿ ಪರ್ಯಾಯ ಕಾರ್ಖಾನೆಗಳು ತೆರೆದು ಕಾರ್ಮಿಕ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಅದೇ ರೀತಿ ಖಾದಿ ಗ್ರಾಮೋದ್ಯೋಗ ಆಯೋಗದಿಂದ ಖಾದಿ ಉತ್ಪನ್ನಗಳ ಮಾರಾಟದ ವಸ್ತುಗಳ ಮೇಲೆ ಉತ್ಪಾದನಾ ವೆಚ್ಚದ ಮೇಲೆ ಶೇ. 20 ರಿಯಾಯಿತಿ ಶೇ. 4 ಬಡ್‌ಡಿ ಹಾಗೂ ಉಳಿದ ಬಡ್ಡಿ ಹಣ ಖಾದಿ ಗ್ರಾಮೋದ್ಯೋಗ ಬರಿಸಲಿದೆ ಎಂದರು.
ಪ್ರತಿ ವರ್ಷ 500 ಮಂದಿಗೆ ನೀಡುವ ತರಬೇತಿಯನ್ನು 1000 ಮಂದಿಗೆ ನೀಡಲು ತಾವು ಆದೇಶಿಸಿದ್ದು ಕೆಜಿಎಫ್‌ನಲ್ಲಿ ಕೆಎಸ್‌ಐಡಿಸಿ ನೀಡಿದ ಜಮೀನಿನಲ್ಲಿ ಉತ್ತಮ ತರಬೇತಿ ಕೇಂದ್ರ ನಿರ್ಮಿಸಲಾಗುತ್ತದೆ ಎಂದರು.
ಈ ವೇಳೆ ಜಿಪಂ ಸದಸ್ಯರಾದ ಆ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‌ಕುಮಾರ್, ಮುಖಂಡರಾದ ಅಪ್ಪಿರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಶ್ರೀಧರ್‌ರಾಜ್, ಜಯಪಾಲ್, ಗುರುರೆಡ್ಡಿ, ರಶೀದ್‌ಖಾನ್ ಹಾಜರಿದ್ದರು.