ಯಾರಿಗೂ ಜಗ್ಗಲ್ಲ, ಬಗ್ಗಲ್ಲ : ಹರಿನಾಥರೆಡ್ಡಿ
ಗುಡಿಬಂಡೆ: ರೈತರ ಮಗನಾಗಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಆಶೀರ್ವಾದದಿಂದ ಹಾಗೂ ಬಾಗೇಪಲ್ಲಿ ವಿದಾನಸಭಾ ಕ್ಷೇತ್ರದ ಜನತೆಯ ಪ್ರೀತಿ ಗಳಿಸಿ ರಾಜಕೀಯ ಕಣಕ್ಕೆ ಇಳಿಯಲು ಹೊರಟಿದ್ದೇನೆಯೇ ಹೊರತು ರೈತರನ್ನು ವಂಚಿಸಿ ಅವರ ಹಣದಿಂದ ರಾಜಕೀಯಕ್ಕೆ ಬರುವ ವ್ಯಕ್ತಿ ನಾನಲ್ಲ. ತಾಕತ್ತಿದ್ದರೆ ನೇರ ಹಣಾಹಣಿಗೆ ಮುಂದಾಗಿ ಎಂದು ಎದುರಾಳಿಗಳಿಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಹರಿನಾಥರೆಡ್ಡಿ ಸವಾಲೆಸೆದಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆ ಹಾಗೂ ಪಕ್ಷದ ರಾಜ್ಯಮಟ್ಟದ ನಾಯಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮುರಿದುಹಾಕಿ, ಸಾಮಾನ್ಯ ಜೆಡಿಎಸ್ ಕಾರ್ಯಕರ್ತರಿಗೆ ತಪ್ಪು ಮಾಹಿತಿ ರವಾನೆ ಮಾಡುವ ನಿಟ್ಟಿನಲ್ಲಿ ಕೆಲವರು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ವ್ಯಕ್ತಿತ್ವ ಮತ್ತು ಬೆಳವಣಿಗೆಗೆ ತೇಜೋವಧೆ ಮಾಡುವ ಕೆಲಸವನ್ನು ಕ್ಷೇತ್ರದ ಕೆಲವು ರಾಜಕೀಯ ಪುಡಾರಿಗಳು ಮಾಡುತ್ತಿದ್ದು, ತಮ್ಮನ್ನು ಚುನಾವಣೆ ಕಣದಿಂದ ದೂರ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ತಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದರು. ಎಚ್ಡಿಕೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬ್ಯುಸಿನೆಸ್ ಮಾಡುವ ವ್ಯಕ್ತಿ ನಾನಲ್ಲವೆಂದು ತಮ್ಮ ಎದುರಾಳಿಗಳಿಗೆ ಕಟುವಾಗಿ ಉತ್ತರಿಸಿದ್ದಾರೆ.
ಕಾನೂನು ಉಲ್ಲಂಘಿಸಿಲ್ಲ: ಇತ್ತೀಚಿನ ದಿನಪತ್ರಿಕೆಯೊಂದರಲ್ಲಿ ತಮ್ಮ ಮೇಲೆ ಭೂ ಕಬಳಿಕೆ ಆರೋಪವನ್ನು ತಳ್ಳಿಹಾಕಿದ ಅವರು ಜಮೀನು ಖರೀದಿಯ ಎಲ್ಲಾ ವ್ಯವಹಾರಗಳನ್ನು ಸಂಬಂಧಪಟ್ಟ ಉಪನೋಂದಾಣಾಧಿಕಾರಿ ಕಚೇರಿಯಲ್ಲಿ ನ್ಯಾಯಬದ್ದವಾಗಿ ಮಾಡಿಕೊಂಡಿದ್ದು, ಇದರಲ್ಲಿ ಯಾವುದೇ ವಂಚನೆ ಇಲ್ಲ. ಕಾನೂನನ್ನು ಉಲ್ಲಂಘಿಸಿ ಯಾರನ್ನು ಮೋಸ ಮಾಡಿ ಬದುಕುವ ಬುದ್ದಿ ತನ್ನದೆಲ್ಲವೆಂದು ನುಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಭಾಸ್ಕರ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಚೆನ್ನಕೃಷ್ಣಾರೆಡ್ಡಿ, ವರ್ಲಕೊಂಡ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಪ.ಪಂ. ಮಾಜಿ ಅಧ್ಯಕ್ಷ ನಾಗರಾಜ್, ಜೆ.ಡಿ.ಎಸ್. ಮುಖಂಡರಾದ ಜೆ. ಚಂದ್ರಶೇಖರ್ ರೆಡ್ಡಿ, ಸೀತಾರಾಮರೆಡ್ಡಿ, ಸದಾಶಿವರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.