ಗುಣಮಟ್ಟದ ಫಲಿತಾಂಶಕ್ಕೆ ಆದ್ಯತೆ ನೀಡಿ: ಪದ್ಮನಾಭ್
ಕೋಲಾರ: ಶಿಕ್ಷಣದ ಪ್ರಗತಿಗೆ ಪೂರಕವಾದ ಅರ್ಥಪೂರ್ಣ ಚರ್ಚೆಗಳು ಶೈಕ್ಷಣಿಕ ಕಾರ್ಯಾಗಾರದಲ್ಲಿ ನಡೆಯುವಂತಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವಿ.ಪದ್ಮನಾಭ್ ಕಿವಿಮಾತು ಹೇಳಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ಅಶ್ರಯದಲ್ಲಿ ನಗರದ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಮ್ಮೇಳನ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗುವಂತಾಗಬೇಕು, ಇಂತಹ ಕಾರ್ಯಾಗಾರಗಳ ಮೂಲಕ ಪರೀಕ್ಷಾ ಪದ್ದತಿಗಳು, ಪಠ್ಯ ಚಟುವಟಿಕೆ, ತರಬೇತಿ ಎಷ್ಟರ ಮಟ್ಟಿಗೆ ಸೂಕ್ತ ಹಾಗೂ ಏನೇನು ಅಗತ್ಯ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಕೆ.ಎಂ.ಜಯರಾಮರೆಡ್ಡಿ ಮಾತನಾಡಿ, ಇಂದಿನ ಫಲಿತಾಂಶ ಸ್ಥಾನದ ಆಧರಿತ ಮಾನದಂಡದ ಮೇಲೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಅಳೆಯಲಾಗುತ್ತಿದೆಯಾದರೂ, ಇದರೊಂದಿಗೆ ನಾವು ಉತ್ತಮ ಗುಣಮಟ್ಟ ಕಾಯ್ದುಕೊಂಡು ಹೋಗಬೇಕಾಗಿರುವುದು ಮುಖ್ಯವಾಗಿದೆ ಎಂದರು. ಮುಂದಿನ ವರ್ಷದಿಂದಲೇ ಹೊಸ ಪಠ್ಯಕ್ರಮ ಅಳವಡಿಕೆಯಾಗಲಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಅಗಲಿವೆ, ಇದೊಂದು ಸವಾಲಾಗಿದ್ದು, ಒಂದಷ್ಟು ಗೊಂದಲಗಳು ಎದುರಾಗಲಿವೆ ಇವುಗಳನ್ನು ನಾವು ಸಮರ್ಥವಾಗಿ ಎದುರಿಸುವಂತಾಗಬೇಕು ಎಂದು ವಿವರಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ಮಂಜುನಾಥ್, ಉಪಾಧ್ಯಕ್ಷ ರವಿಚಂದ್ರ, ವಿಷಯ ಪರಿವೀಕ್ಷಕ ಕೆ. ಶ್ರೀನಿವಾಸಗೌಡ, ಸಂಘದ ಜಿಲ್ಲಾಧ್ಯಕ್ಷ ಡಿ.ವಿ.ರಾಮಚಂದ್ರಪ್ಪ, ಕಾರ್ಯದರ್ಶಿ ಮುನಿವೆಂಕಟಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿಯಪ್ಪ ಗೋಕುಲ್ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್. ಮುಕುಂದ ಸ್ವಾಗತಿಸಿ, ಮೋಹನಾಚಾರಿ ನಿರೂಪಿಸಿದರು.